ಕರೀಂನಗರ, ತೆಲಂಗಾಣ : ರಾಜ್ಯದಲ್ಲಿ ವಿಚಿತ್ರ ಘಟನೆವೊಂದು ಬೆಳಕಿಗೆ ಬಂದಿದೆ. ಉದ್ಯಮಿಯೊಬ್ಬ ಹೊಸ ಹೋಟೆಲ್ ಆರಂಭಿಸಿದ್ದು, ತನ್ನ ಹೋಟೆಲ್ ಬಗ್ಗೆ ಜನಕ್ಕೆ ತಿಳಿಯಲೆಂದು ರೂಪಾಯಿ ನೋಟ್ಗೆ ಒಂದು ಬಿರಿಯಾನಿ ಕೊಡುವುದಾಗಿ ಪ್ರಚಾರ ನಡೆಸಿತ್ತು. ಆದ್ರೆ ಅನೇಕ ಜನರು ಒಂದು ರೂಪಾಯಿ ನೋಟಿನ ಜೊತೆ 100 ರೂಪಾಯಿ ದಂಡ ಕಟ್ಟಿ ಬಂದಿರುವುದು ಬೆಳಕಿಗೆ ಬಂದಿದೆ.
ಕರೀಂನಗರದ ಹೊಟೇಲ್‌ನ ಉದ್ಘಾಟನಾ ಕೊಡುಗೆಯಾಗಿ ಒಂದು ರೂಪಾಯಿಗೆ ಬಿರಿಯಾನಿ ಘೋಷಿಸಿದ್ದು, ಜನಸಾಗರವೇ ಹರಿದು ಬಂದಿತ್ತು. ಹೊಟೇಲ್ ಪ್ರದೇಶದಲ್ಲಿ ನೂರಾರು ವಾಹನಗಳು ನಿಲುಗಡೆ ಮಾಡಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಉದ್ಘಾಟನೆ ಸಂದರ್ಭದಲ್ಲಿ ಹೋಟೆಲ್ ಮಾಲೀಕರು ಹೊಸ ತಂತ್ರ ಬಳಸಿ ತಮ್ಮ ಹೊಟೇಲ್ ಬಗ್ಗೆ ವಿವಿಧ ರೀತಿಯಲ್ಲಿ ಜಾಹೀರಾತು ನೀಡಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ.
ಒಂದು ರೂಪಾಯಿ ನೋಟು ಕೊಟ್ಟವರಿಗೆ ಬಿರಿಯಾನಿ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗಿತ್ತು. ಈ ಪ್ರಚಾರ ವ್ಯಾಪಕವಾಗುತ್ತಿದ್ದಂತೆಯೇ ಒಂದು ರೂಪಾಯಿ ನೋಟುಗಳನ್ನು ಸಂಗ್ರಹಿಸಿ ಗ್ರಾಹಕರು ಹೋಟೆಲ್ ಮುಂದೆ ಸರತಿ ಸಾಲಿನಲ್ಲಿ ನಿಂತರು. ಕ್ರಮೇಣ ಜನಸಂದಣಿ ಹೆಚ್ಚಾದಂತೆ ಕೆಲವರು ಹೋಟೆಲ್‌ಗೆ ನುಗ್ಗಲು ಯತ್ನಿಸಿದರು.
ಕೇವಲ ಒಂದು ರೂಪಾಯಿಗೆ ಬಿರಿಯಾನಿ ನೀಡುವುದಾಗಿ ಸರತಿ ಸಾಲಿನಲ್ಲಿ ನಿಂತರೂ ಸಹ ಕೆಲವರು ತಾಳ್ಮೆ ಕಳೆದುಕೊಂಡು ನೂಕಲು ಯತ್ನಿಸಿದ್ದರು. ಒಂದು ರೂಪಾಯಿಯ ಬಿರಿಯಾನಿ ಪ್ರಚಾರದ ಎಫೆಕ್ಟ್‌ನಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೋಟೆಲ್‌ಗೆ ಆಗಮಿಸಲು ಪ್ರಾರಂಭಿಸಿದರು. ಹೋಟೆಲ್ ಮಾಲೀಕರ ಈ ಪ್ರಚಾರದಿಂದ ಕೆಲವೇ ಗಂಟೆಗಳಲ್ಲಿ ಸುಮಾರು 800 ಪಾರ್ಸೆಲ್‌ಗಳನ್ನು ಮಾರಾಟ ಮಾಡಿದರು.
ಇನ್ನು ಮಾಡಿದ್ದ ಬಿರಿಯಾನಿ ಎಲ್ಲವೂ ಕೆಲವೇ ಗಂಟೆಗಳಲ್ಲಿ ಖಾಲಿಯಾಗಿದ್ದು, ಗ್ರಾಹಕರಿಗೆ ಬಿರಿಯಾನಿ ಇಲ್ಲ, ಖಾಲಿಯಾಗಿದೆ ಎಂದು ಅಂಗಡಿ ಕೆಲಸಗಾರರು ತಿಳಿಸಿದ್ದಾರೆ. ಆದರೆ ಹೋಟೆಲ್‌ಗೆ ಬಂದವರು ಬಿರಿಯಾನಿ ಕೊಡಬೇಕು ಎಂದು ಜಗಳ ಆರಂಭಿಸಿದಾಗ ಹೊಟೇಲ್ ಆಡಳಿತ ಮಂಡಳಿ ಗಲಿಬಿಲಿಗೊಂಡಿತು. ಬಿರಿಯಾನಿ ವಿಚಾರವಾಗಿ ಗ್ರಾಹಕರು ಹೋಟೆಲ್ ಆಡಳಿತ ಮಂಡಳಿಯೊಂದಿಗೆ ಜಗಳಕ್ಕೆ ನಿಂತರು.
ಇನ್ನು ಇವರ ಜಗಳ ವಿಕೋಪಕ್ಕೆ ತಿರುಗಿದ್ದು, ಟ್ರಾಫಿಕ್ ಸಮಸ್ಯೆಯುಂಟಾಗುವ ಮಟ್ಟಕ್ಕೆ ಮಾರಾಮಾರಿ ನಡೆಯಿತು. ಸ್ಥಳದಲ್ಲಿ ನೂಕುನುಗ್ಗಲು ಸಂಭವಿಸುವ ಅಪಾಯವಿರುವುದು ಅರಿತ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಟ್ರಾಫಿಕ್ ಹೆಚ್ಚಾದಾಗ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡರು. ಬಳಿಕ ಪೊಲೀಸರು ಮ್ಯಾನೇಜರ್‌ಗೆ ತರಾಟೆಗೆ ತೆಗೆದುಕೊಂಡು ಹೋಟೆಲ್‌ಗೆ ಬಂದ್ ಮಾಡಿದರು.
ಇನ್ನು ಬಿರಿಯಾನಿ ಕೊಂಡಕೊಳ್ಳಲು ಬಂದಿದ್ದ ಗ್ರಾಹಕರನ್ನೆಲ್ಲರನ್ನೂ ಪೊಲೀಸರು ಸಮಾಧಾನಪಡಿಸಿ ವಾಪಸ್ ಕಳುಹಿಸಿದರು. ಅಷ್ಟೇ ಅಲ್ಲ ಒಂದು ರೂಪಾಯಿ ಬಿರಿಯಾನಿಗಾಗಿ ಬಂದು ವಾಹನವನ್ನು ರಸ್ತೆ ಪಕ್ಕದಲ್ಲಿ ಅಡ್ಡಾ ದಿಡ್ಡಿಯಾಗಿ ನಿಲ್ಲಿಸಿದ ಕೆಲವರಿಗೆ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದರು. ನೋ ಪಾರ್ಕಿಂಗ್ ಮಾಡಿದ್ದಕ್ಕೆ ಪ್ರತಿಯೊಬ್ಬರಿಗೂ 100 ರೂಪಾಯಿ ದಂಡ ವಿಧಿಸಿದರು. ಕೆಲವರು 1 ರೂಪಾಯಿ ನೋಟಿಗೆ ಒಂದು ಬಿರಿಯಾನಿ ತೆಗೆದುಕೊಂಡ ಹೋಗಲು ಬಂದು 100 ದಂಡ ಕೊಟ್ಟು ಹೋದ ಪ್ರಸಂಗವೂ ಕಂಡು ಬಂತು.
ಓದಿ: ಕಷ್ಟನಷ್ಟ ನೂರಾರು, ಕೈ ಹಿಡಿದಿದ್ದು ಬಿರಿಯಾನಿ: ಸೋತು ಗೆದ್ದ ಮಾಧುರಿಯ ಯಶೋಗಾಥೆ