ರುದ್ರಾಪುರ(ಉತ್ತರಾಖಂಡ): ಮೂಲಭೂತ ಹಕ್ಕಿನ ಪರಿವ್ಯಾಪ್ತಿಗೆ ಬರುವ ಮತದಾನವನ್ನು ಸಂವಿಧಾನದಲ್ಲಿ ಗೌಪ್ಯವಾಗಿಡಬೇಕೆಂದು ನಮೂದಿಸಲಾಗಿದೆ. ಯಾರಿಗೆ ಮತ ಚಲಾಯಿಸಬೇಕು ಎಂಬುದು ಆ ಮತದಾರನ ವಿವೇಚನೆಗೆ ಬಿಟ್ಟಿದ್ದು. ಆದರೆ, ಉತ್ತರಾಖಂಡದಲ್ಲಿ ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ಒಂದೇ ಕಾರಣಕ್ಕಾಗಿ ಮುಸ್ಲಿಂ ಕುಟುಂಬವನ್ನು ಥಳಿಸಿದ ಘಟನೆ ನಡೆದಿದೆ.
ಉತ್ತರಾಖಂಡದ ವಿಧಾನಸಭೆಗೆ ಇತ್ತೀಚೆಗಷ್ಟೇ ಚುನಾವಣೆ ನಡೆದು ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿದೆ. ಮತದಾನದ ವೇಳೆ ಬಿಜೆಪಿಗೆ ಮತ ಹಾಕಲಾಗಿದೆ ಎಂದು ಆರೋಪಿಸಿ ಮುಸ್ಲಿಂ ಸಮುದಾಯದ ಜನರು ತನ್ನದೇ ಸಮುದಾಯದ ಕುಟುಂಬದ ನಾಲ್ವರನ್ನು ದೊಣ್ಣೆ, ಕೋಲುಗಳಿಂದ ಥಳಿಸಿದೆ. ಈ ಬಗ್ಗೆ ಸಂತ್ರಸ್ತರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ರುದ್ರಾಪುರದ ಭೂತಬಂಗ್ಲಾ ಪ್ರದೇಶದಲ್ಲಿ ವಾಸಿಸುವ ಮುಸ್ಲಿಂ ಸಮುದಾಯದ ಪರ್ವೀನ್ ಮತ್ತು ಅನೀಶ್ ಮಿಯಾನ್ ಏಪ್ರಿಲ್ 5 ರಂದು ಸಂಜೆ 7 ಗಂಟೆ ಸುಮಾರಿಗೆ ಅಂಗಡಿಯೊಂದರ ಬಳಿ ನಿಂತಿದ್ದಾಗ, ತನ್ನದೇ ಸಮುದಾಯದ ಕೆಲವರು ದೊಣ್ಣೆ, ಕೋಲುಗಳನ್ನು ಹಿಡಿದುಕೊಂಡು ಬಂದು ಗಲಾಟೆ ಶುರು ಮಾಡಿದರು.
ಚುನಾವಣೆಯಲ್ಲಿ ನೀವು ಬಿಜೆಪಿಗೆ ಮತ ಹಾಕಿದ್ದೀರಾ ಎಂದು ಅನೀಶ್ ಮಿಯಾನ್ ಜೊತೆ ಕಾದಾಟಕ್ಕೆ ಇಳಿದಿದ್ದಾರೆ. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಪರ್ವೀನ್ ಮತ್ತು ಅನೀಶ್ ಮಿಯಾನ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದಲ್ಲದೇ, ಮನೆಯಲ್ಲಿದ್ದ ಇಬ್ಬರು ಮಕ್ಕಳನ್ನೂ ಥಳಿಸಲಾಗಿದೆ. ಗಾಯಗೊಂಡ ಪರ್ವೀನ್ ಮತ್ತ ಆಕೆಯ ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಈ ಹಳ್ಳಿಯಲ್ಲಿ ಮೊದಲ ಬಾರಿಗೆ ರಿಂಗಣಿಸಿದ ಮೊಬೈಲ್! ಎಲ್ಲಿದೆ ಆ ಊರು?