ನವದೆಹಲಿ: ಪೆಗಾಸಸ್ ಸ್ಪೈವೇರ್ ಮೂಲಕ ಪತ್ರಕರ್ತರು ಮತ್ತು ಕಾರ್ಯಕರ್ತರ ಫೋನ್‌ಗಳನ್ನು ಹ್ಯಾಕ್ ಮಾಡುವ ಸಾಧ್ಯತೆಯಿದೆ ಎಂಬ ವರದಿ ಪ್ರಸಾರವಾಗುತ್ತಿದ್ದಂತೆ, ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. "ನಮ್ಮ ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ. ನಾನು ಖಂಡಿತವಾಗಿಯೂ ಪೆಗಾಸಸ್ ಸ್ಪೈವೇರ್ ಸಮಸ್ಯೆಯನ್ನು ಸದನದಲ್ಲಿ ಎತ್ತುತ್ತೇನೆ" ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಂಸತ್ತಿನ ಮಾನ್ಸೂನ್ ಅಧಿವೇಶನ ಪ್ರಾರಂಭವಾಗುವ ಮುನ್ನ, ಹಲವಾರು ಸದಸ್ಯರು ಪೆಗಾಸಸ್ ಸ್ಪೈವೇರ್ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಇದನ್ನು ಓದಿ: ಪೆಗಾಸಸ್ ಸಾಫ್ಟ್‌ವೇರ್ ಬಳಸಿಕೊಂಡು ನೂರಕ್ಕೂ ಹೆಚ್ಚು ಭಾರತೀಯರ ಮೊಬೈಲ್ ಹ್ಯಾಕ್
ಮಾನ್ಸೂನ್ ಅಧಿವೇಶನವು ಇಂದಿನಿಂದ ಪ್ರಾರಂಭವಾಗಿದ್ದು, ಆಗಸ್ಟ್ 13 ರಂದು ಮುಕ್ತಾಯಗೊಳ್ಳಲಿದೆ. ಪೆಗಾಸಸ್ ಸ್ಪೈವೇರ್ ಬಳಸುವ ಅಪರಿಚಿತ ಏಜೆನ್ಸಿಯ ಸಂಭವನೀಯ ಗುರಿಗಳ ಪಟ್ಟಿಯಲ್ಲಿ 40 ಕ್ಕೂ ಹೆಚ್ಚು ಭಾರತೀಯ ಪತ್ರಕರ್ತರ ಹೆಸರುಗಳು ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲ ಪ್ರತಿಪಕ್ಷದ ನಾಯಕರು, ಕೇಂದ್ರ ಸಚಿವರ ಫೋನ್‌ಗಳನ್ನು ಸ್ಪೈವೇರ್ ಮೂಲಕ ಹ್ಯಾಕ್ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಸ್ಪೈವೇರ್ 'ಪೆಗಾಸಸ್' ಅನ್ನು ಇಸ್ರೇಲ್ ಮೂಲದ ಎನ್ಎಸ್ಒ ಗ್ರೂಪ್ ಅಭಿವೃದ್ಧಿಪಡಿಸಿದೆ. ಕಂಪನಿಯು ಸಾಧನಗಳನ್ನು ಹ್ಯಾಕಿಂಗ್ ಮಾಡುವಲ್ಲಿ ಪರಿಣತಿ ಹೊಂದಿದೆ ಮತ್ತು ಬೇಹುಗಾರಿಕೆ ಉದ್ದೇಶಗಳಿಗಾಗಿ ವಿಶ್ವದ ವಿವಿಧ ಸರ್ಕಾರಗಳಿಗೆ ಇದನ್ನು ಪೂರೈಸುತ್ತದೆ.