ನವದೆಹಲಿ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಕಾರ್ಯಾಧ್ಯಕ್ಷರನ್ನಾಗಿ ಹಿರಿಯ ನಾಯಕರಾದ ಪ್ರಫುಲ್ ಪಟೇಲ್ ಮತ್ತು ಸುಪ್ರಿಯಾ ಸುಳೆ ಅವರ ಹೆಸರನ್ನು ಪಕ್ಷದ ಅಧ್ಯಕ್ಷ ಶರದ್ ಪವಾರ್ ಶನಿವಾರ ಪ್ರಕಟಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಎನ್‌ಸಿಪಿಯ 25ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ 82 ವರ್ಷದ ಹಿರಿಯ ರಾಜಕಾರಣಿ ಪವಾರ್ ಈ ಘೋಷಣೆ ಮಾಡಿದ್ದಾರೆ.
ಎನ್‌ಸಿಪಿಯನ್ನ 1999ರಲ್ಲಿ ಶರದ್ ಪವಾರ್ ಮತ್ತು ಪಿಎ ಸಂಗ್ಮಾ ಸ್ಥಾಪಿಸಿದ್ದರು. ಇಂದು 25ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮವನ್ನು ದೆಹಲಿ ನಡೆಸಲಾಗಿದೆ. ಹಿರಿಯ ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಮ್ಮುಖದಲ್ಲಿ ಶರದ್ ಪವಾರ್ ಪಕ್ಷದ ಪ್ರಮುಖ ಹುದ್ದೆಗಳಿಗೆ ಹೊಸ ನಾಯಕರನ್ನು ಘೋಷಿಸಿದ್ದಾರೆ.
ಈ ಬಗ್ಗೆ ಸುಪ್ರಿಯಾ ಸುಳೆ ಟ್ವೀಟ್ ಮಾಡಿದ್ದು, ನಾನು ಎನ್‌ಸಿಪಿ ಅಧ್ಯಕ್ಷರಿಗೆ ಆಭಾರಿಯಾಗಿದ್ದೇನೆ. ಪವಾರ್ ಸಾಹೇಬ್ ಮತ್ತು ಎಲ್ಲ ಹಿರಿಯ ನಾಯಕರು, ಪಕ್ಷದ ಸಹೋದ್ಯೋಗಿಗಳು, ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳು ಪ್ರಫುಲ್ ಭಾಯ್ ಅವರೊಂದಿಗೆ ಕಾರ್ಯಾಧ್ಯಕ್ಷರ ಈ ದೊಡ್ಡ ಜವಾಬ್ದಾರಿಯನ್ನು ನೀಡಿದ್ದದ್ದಾರೆ. ಎನ್‌ಸಿಪಿಯನ್ನು ಮತ್ತಷ್ಟು ಬಲಪಡಿಸಲು ನಾನು ನಿಮ್ಮೆಲ್ಲರೊಂದಿಗೆ ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಪವಾರ್ ಮುಂದಾಗಿದ್ದರು. ಆದರೆ, ನಂತರ ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ಇತರ ರಾಜಕೀಯ ಮುಖಂಡರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಬಳಿಕ ಪವಾರ್ ಅವರ ಪ್ರಸ್ತಾಪವನ್ನು ಚರ್ಚಿಸಲು ಸಮಿತಿಯೊಂದನ್ನು ರಚಿಸಿದ್ದರು. ಮೇ 5ರಂದು ಆ ಸಮಿತಿಯನ್ನು ಪವಾರ್ ಅವರನ್ನು ರಾಜೀನಾಮೆಯನ್ನು ತಿರಸ್ಕರಿಸಿ ಪಕ್ಷದ ಅಧ್ಯಕ್ಷರಾಗಿ ಅವರನ್ನೇ ಮುಂದುವರಿಯುವಂತೆ ಒತ್ತಾಯಿಸಿತ್ತು.
ರಾಜ್ಯಗಳ ಉಸ್ತುವಾರಿ ಹೊಣೆ: ಸುಪ್ರಿಯಾ ಸುಳೆ ಅವರು ಶರದ್ ಪವಾರ್ ಅವರ ಪುತ್ರಿ. ಪುಣೆ ಜಿಲ್ಲೆಯ ಬಾರಾಮತಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 53 ವರ್ಷದ ಸಂಸದೆ ಸುಪ್ರಿಯಾ ಮಹಾರಾಷ್ಟ್ರ, ಪಂಜಾಬ್ ಮತ್ತು ಹರಿಯಾಣದಲ್ಲಿ ಮುಂಬರುವ ರಾಜ್ಯ ಚುನಾವಣೆಗಳ ಉಸ್ತುವಾರಿಯನ್ನೂ ವಹಿಸಿಕೊಳ್ಳಲಿದ್ದಾರೆ. ಲೋಕಸಭೆಯ ಸಮನ್ವಯದ ಜವಾಬ್ದಾರಿಯೂ ಅವರ ಮೇಲಿದೆ. ಅವರಿಗೆ ಪಕ್ಷದ ಮಹಿಳಾ ಮತ್ತು ಯುವ ಘಟಕದ ಜವಾಬ್ದಾರಿಯನ್ನೂ ನೀಡಲಾಗಿದೆ. ರಾಜ್ಯಸಭಾ ಸದಸ್ಯರಾಗಿರುವ ಪ್ರಫುಲ್ ಪಟೇಲ್ ಅವರಿಗೆ ರಾಜ್ಯಸಭೆಯೊಂದಿಗೆ ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಜಾರ್ಖಂಡ್ ಮತ್ತು ಗೋವಾ ರಾಜ್ಯಗಳ ಜವಾಬ್ದಾರಿಯನ್ನು ನೀಡಲಾಗಿದೆ.
ಈ ಬೆಳವಣಿಗೆಳ ಬಗ್ಗೆ ಪ್ರತಿಕ್ರಿಯಿಸಿದ ಎನ್‌ಸಿಪಿಯ ಹಿರಿಯ ನಾಯಕ ಮತ್ತು ಮಾಜಿ ಸಚಿವ ಛಗನ್ ಭುಜಬಲ್, ಚುನಾವಣೆಗಳು ಹತ್ತಿರವಿರುವ ಕಾರಣ ಪ್ರಫುಲ್ ಪಟೇಲ್ ಮತ್ತು ಸುಪ್ರಿಯಾ ಸುಳೆ ಅವರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡಲಾಗಿದೆ. ಇದು 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಉತ್ತಮವಾಗಿ ಕೆಲಸ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಹಿರಿಯ ನಾಯಕ ಜಿತೇಂದ್ರ ಅವ್ಹಾದ್ ಸಹ ಈ ನೇಮಕಾತಿಗಳು ಸ್ವಾಗತಾರ್ಹ ಎಂದು ಹೇಳಿದ್ದಾರೆ. ಇವರಿಬ್ಬರು ಶರದ್ ಪವಾರ್‌ಗೆ ಹತ್ತಿರವಾಗಿದ್ದಾರೆ. ಅವರ ಅಡಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿಯ ಸುಗ್ರೀವಾಜ್ಞೆ ಅಂಗೀಕರಿಸಲು ಬಿಜೆಪಿ ವಿಫಲವಾದರೆ, ಅದೇ ದೇಶಕ್ಕೆ ಸಂದೇಶ: ಪವಾರ್ ಭೇಟಿ ಬಳಿಕ ಕೇಜ್ರಿವಾಲ್ ಹೇಳಿಕೆ