ಲಕ್ಸರ್ (ಉತ್ತರಾಖಂಡ): ಹರಿದ್ವಾರ ಜಿಲ್ಲೆಯ ಲಕ್ಸರ್ ಪ್ರದೇಶದ ರೈಸಿ ರೈಲು ನಿಲ್ದಾಣದ ಬಳಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿಯಿಂದಾಗಿ ರೈಲಿನಲ್ಲಿದ್ದ ಪ್ರಯಾಣಿಕರಲ್ಲಿ ಆತಂಕ ಉಂಟಾಯಿತು. ಬಂಗಂಗಾ ನದಿಯ ಸೇತುವೆಯ ಮೇಲೆ ಲೋಕೋಪೈಲಟ್ ರೈಲನ್ನು ನಿಲ್ಲಿಸಿದಾಗ ಪ್ರಯಾಣಿಕರಲ್ಲಿ ಭಯ ಇನ್ನಷ್ಟು ಹೆಚ್ಚಾಯಿತು. ಬಳಿಕ ಪ್ರಯಾಣಿಕರು ಜೀವ ಉಳಿಸಿಕೊಳ್ಳಲು ಸೇತುವೆಯ ಅಂಚಿನಿಂದ ಓಡುತ್ತಿರುವುದು ಕಂಡು ಬಂತು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಲಕ್ನೋದಿಂದ ಚಂಡೀಗಢಕ್ಕೆ ಹೋಗುತ್ತಿದ್ದ ಸದ್ಭಾವನಾ ಎಕ್ಸ್‌ಪ್ರೆಸ್ ಭಾನುವಾರ ಲಕ್ಸರ್ ಪ್ರದೇಶದ ರೈಸಿ ರೈಲು ನಿಲ್ದಾಣದ ಬಳಿ ತಲುಪಿದಾಗ, ಯಾರೋ ರೈಲಿನ ಚೈನ್ ಎಳೆದಿದ್ದಾರೆ. ಚೈನ್ ಎಳೆದ ತಕ್ಷಣ, ರೈಲು ಬಂಗಂಗಾ ನದಿಯ ಮೇಲೆ ಜಾಂ ಆಗಿದೆ. ಆಗ ರೈಲಿನ ಬ್ರೇಕ್‌ನಿಂದ ಹೊಗೆ ಬರಲು ಶುರುವಾಗಿದೆ. ಹೊಗೆಯನ್ನು ನೋಡಿ ರೈಲಿನಲ್ಲಿದ್ದ ಪ್ರಯಾಣಿಕರು ರೈಲಿಗೆ ಬೆಂಕಿ ಹೊತ್ತಿ ಉರಿಯುತ್ತಿದೆ ಎಂದು ಭಾವಿಸಿದ್ದಾರೆ. ಬೆಂಕಿ ತಗುಲಿರುವ ವದಂತಿ ಹರಡುತ್ತಿದ್ದಂತೆ ಪ್ರಯಾಣಿಕರು ರೈಲಿನಿಂದ ಕೆಳಗಿಳಿದು ಓಡಿದ್ದಾರೆ.
ಇದನ್ನೂ ಓದಿ: ಒಡಿಶಾ ತ್ರಿವಳಿ ರೈಲು ಅಪಘಾತ ಕೇಸ್: ಸಿಬಿಐ ಬಂಧಿತ ಮೂವರು ಅಧಿಕಾರಿಗಳು ಸೇರಿ 7 ರೈಲ್ವೆ ನೌಕರರ ಅಮಾನತು
ರೈಲಿನಲ್ಲಿದ್ದ ಪ್ರಯಾಣಿಕರು ಬಂಗಂಗಾ ನದಿಗೆ ನಿರ್ಮಿಸಿದ ಸೇತುವೆಯ ಮೇಲೆ ಇಳಿದಾಗ, ಆ ಸಮಯದಲ್ಲಿ ಬಂಗಂಗಾ ನದಿಯು ರಭಸವಾಗಿ ಹರಿಯುತ್ತಿತ್ತು. ಪ್ರಯಾಣಿಕರು ಪ್ರಾಣವನ್ನೇ ಪಣಕ್ಕಿಟ್ಟು ಸೇತುವೆ ದಾಟುತ್ತಿರುವುದು ಕಂಡುಬಂತು. ಘಟನೆಯ ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ರೈಲ್ವೇಯ ಉನ್ನತಾಧಿಕಾರಿಗಳು ರೈಲಿನ ಬ್ರೇಕ್ ಸರಿಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮಾಹಿತಿಯ ಪ್ರಕಾರ, ಲಕ್ನೋ-ಚಂಡೀಗಢ ಎಕ್ಸ್‌ಪ್ರೆಸ್ (ಸದ್ಭಾವನಾ ಎಕ್ಸ್‌ಪ್ರೆಸ್) ಪ್ರತಿದಿನ ಬೆಳಗ್ಗೆ 11:25 ಕ್ಕೆ ಲಕ್ಸಾರ್ ರೈಲು ನಿಲ್ದಾಣವನ್ನು ತಲುಪುತ್ತದೆ. ಆದರೆ ಭಾನುವಾರದ ವದಂತಿಯಿಂದಾಗಿ, ರೈಲು 12:28ಕ್ಕೆ ಲಕ್ಸರ್ ನಿಲ್ದಾಣವನ್ನು ತಲುಪಿತು.
ನದಿಗೆ ಹಾರಿದ ಪ್ರಯಾಣಿಕರು: ಸುಮಾರು ಒಂದು ಗಂಟೆ ಕಾಲ ರೈಲು ಬಂಗಂಗಾ ಸೇತುವೆಯ ಮೇಲೆ ನಿಂತಿತ್ತು ಎಂದು ಹೇಳಲಾಗುತ್ತಿದೆ. ಈ ವೇಳೆ ಪ್ರಯಾಣಿಕರಲ್ಲಿ ನೂಕುನುಗ್ಗಲು ಉಂಟಾಯಿತು. ಕೆಲವು ಪ್ರಯಾಣಿಕರು ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ನೀರಿಗೆ ಹಾರಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳೀಯರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಈ ಬಗ್ಗೆ ರೈಲ್ವೆ ಮತ್ತು ಪೊಲೀಸ್ ಇಲಾಖೆಯಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. ಅಲ್ಲದೇ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: Balasore Train Accident: ಸಿಬಿಐನಿಂದ ಮೂವರು ರೈಲ್ವೆ ಸಿಬ್ಬಂದಿ ಬಂಧನ