ರೋಹ್ತಾಸ್(ಬಿಹಾರ): ಗಯಾದಿಂದ ದೆಹಲಿಗೆ ಹೋಗುತ್ತಿದ್ದ ಮಹಾಬೋಧಿ ಎಕ್ಸ್‌ಪ್ರೆಸ್ ರೈಲು ಇಂದು ಬಹುದೊಡ್ಡ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿರುವ ಘಟನೆ ರೋಹ್ತಾಸ್ನಲ್ಲಿ ನಡೆದಿದೆ. ಸಸಾರಾಮ್ ಮತ್ತು ಕರಬಂದಿಯಾ ನಿಲ್ದಾಣಗಳ ನಡುವೆ ರೈಲು ಚಲಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಎರಡು ಪ್ಯಾಸೆಂಜರ್ ಬೋಗಿಗಳು ಇಂಜಿನ್ನಿಂದ ಬೇರ್ಪಟ್ಟಿದ್ದು, ರೈಲಿನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡಿದ್ದಾರೆ.
ಅದೃಷ್ಟವಶಾತ್ ರೈಲಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅವಘಡ ಸಂಭವಿಸಿಲ್ಲ. ಘಟನೆ ಬಗ್ಗೆ ಮಾಹಿತಿ ಪಡೆದ ರೈಲ್ವೇ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೋಗಿಗಳನ್ನು ಇಂಜಿನ್ಗೆ ಜೋಡಿಸಿದ ನಂತರ ರೈಲು ತನ್ನ ಗಮ್ಯ ಸ್ಥಾನಕ್ಕೆ ಪ್ರಯಾಣ ಮುಂದುವರಿಸಿದೆ.
ರೈಲು ರೋಹ್ತಾಸ್‌ನ ಡೆಹ್ರಿ ನಿಲ್ದಾಣದಿಂದ ಹೊರಟು ಸಸಾರಂ ರೈಲು ನಿಲ್ದಾಣವನ್ನು ತಲುಪುವ ಮೊದಲೇ ಪ್ರಯಾಣಿಕರಿದ್ದ ಎರಡು ಬೋಗಿಗಳು ಸಂಪೂರ್ಣವಾಗಿ ರೈಲಿನಿಂದ ಬೇರ್ಪಟ್ಟಿವೆ. ಭಾರೀ ಸದ್ದು ಕೇಳಿದ ಬೆನ್ನಲ್ಲೇ ಬೋಗಿಗಳು ಬೇರ್ಪಟ್ಟು, ಜರ್ಕ್ನಿಂದ ರೈಲು ನಿಂತಿದೆ. ಇದರಿಂದ ಭಯಭೀತಗೊಂಡ ಪ್ರಯಾಣಿಕರು ರೈಲಿನಿಂದ ಇಳಿದು ದೂರ ಸರಿದಿದ್ದಾರೆ. ಎಲ್ಲ ನಿಲ್ದಾಣಗಳಲ್ಲಿ ರೈಲನ್ನು ಪರಿಶೀಲಿಸಿ ನಂತರ ಕಳುಹಿಸಲಾಗುತ್ತದೆ. ಮಹಾಬೋಧಿ ಎಕ್ಸ್‌ಪ್ರೆಸ್ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದೆ. ಇದು ರೈಲ್ವೇ ಆಡಳಿತದ ನಿರ್ಲಕ್ಷ್ಯ ಎಂದು ಪ್ರಯಾಣಿಕರು ದೂರಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭೀಕರ ರೈಲು ಅಪಘಾತ.. 53 ಮಂದಿಗೆ ಗಾಯ