ನವದೆಹಲಿ: ಮಾನ್ಸೂನ್ ಅಧಿವೇಶನದ ಮೂರನೇ ವಾರದಲ್ಲಿ ರಾಜ್ಯಸಭೆಯ ಎಂಟು ಮಸೂದೆಗಳನ್ನು ಅಂಗೀಕಾರ ಮಾಡಲಾಗಿದ್ದು, ಈ ಮೂಲಕ ಮೇಲ್ಮನೆಯ ಉತ್ಪಾದಕತೆಯ ಪ್ರಮಾಣ (Productivity) ಶೇಕಡಾ 24.2ಕ್ಕೆ ಏರಿಕೆಯಾಗಿದೆ.
ಎರಡನೇ ವಾರದಲ್ಲಿ ಸದನದ ಉತ್ಪಾದಕತೆಯ ಪ್ರಮಾಣ ಶೇಕಡಾ 13.70ರಷ್ಟು ಮತ್ತು ಮೊದಲ ವಾರದಲ್ಲಿ ಶೇಕಡಾ 32.20ರಷ್ಟಿತ್ತು ಎಂದು ರಾಜ್ಯಸಭೆಯ ಸಂಶೋಧನಾ ಇಲಾಖೆ ಮಾಹಿತಿ ನೀಡಿದೆ.
ಮೂರೂ ವಾರಗಳ ಒಟ್ಟು ಉತ್ಪಾದಕತೆಯ ಪ್ರಮಾಣ 22.60ರಷ್ಟಿದೆ ಎಂದು ರಾಜ್ಯಸಭೆಯ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ. ಜುಲೈ 19ರಿಂದ ಆರಂಭವಾದ ಅಧಿವೇಶನದಲ್ಲಿ ಮೂರು ವಾರದಿಂದಲೂ ಗದ್ದಲ ನಡೆದಿದ್ದು, ವಿಪಕ್ಷಗಳು ಪೆಗಾಸಸ್, ಕೃಷಿ ಕಾಯ್ದೆಗಳು ಮತ್ತು ಇತರ ವಿಚಾರಗಳ ಬಗ್ಗೆ ಚರ್ಚಿಸಲು ಪಟ್ಟು ಹಿಡಿದಿದ್ದರು.
ಬಿಜೆಪಿ ಸೇರಿದಂತೆ ಎಐಎಡಿಎಂಕೆ, ಆಮ್ ಆದ್ಮಿ ಪಕ್ಷ, ಬಿಜೆಡಿ, ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ಡಿಎಂಕೆ, ಜೆಡಿ(ಯು), ಎನ್ಸಿಪಿ, ಆರ್ಜೆಡಿ, ಆರ್ಪಿಐ, ಶಿವಸೇನೆ, ಟಿಡಿಪಿ, ಟಿಎಂಸಿ ಪಕ್ಷಗಳು ಚರ್ಚಯಲ್ಲಿ ಭಾಗವಹಿಸಿದ್ದವು. ಅಧಿವೇಶನದಲ್ಲಿ ಸುಮಾರು 17 ಪಕ್ಷಗಳ 68 ಮಂದಿ ಚರ್ಚೆಗಳಲ್ಲಿ ಭಾಗವಹಿಸಿದ್ದರು.
ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರು ಮತ್ತು ಪಕ್ಷಗಳ ಸದಸ್ಯರು ಸೇರಿ ಶೇಕಡಾ 87ರಷ್ಟು ಮಂದಿ ಹಾಜರಾಗಿದ್ದು, ಶೇಕಡಾ 6ಕ್ಕಿಂತ ಕಡಿಮೆ ಮಂದಿ ರೈತರ ವಿಚಾರವಾಗಿ, ಪೆಗಾಸಸ್ ವಿಚಾರವಾಗಿ ಚರ್ಚೆ ನಡೆಸಬೇಕೆಂದು ಪಟ್ಟು ಹಿಡಿದಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಮಸೂದೆಗಳ ಅಂಗೀಕಾರಕ್ಕಾಗಿ ಸದನವು 3 ಗಂಟೆ 25 ನಿಮಿಷಗಳನ್ನು ತೆಗೆದುಕೊಳ್ಳಲಾಗಿದೆ. ಈ ವಾರದಲ್ಲಿ ಒಟ್ಟು 28 ಗಂಟೆ 30 ನಿಮಿಷ ಸದನ ನಡೆದಿದ್ದು, 1 ಗಂಟೆ 41 ನಿಮಿಷಗಳನ್ನು ಪ್ರಶ್ನೋತ್ತರ ವೇಳೆಗೆ ತೆಗೆದುಕೊಳ್ಳಲಾಯಿತು. ಇದರಲ್ಲಿ 17 ನಕ್ಷತ್ರ ಹಾಕಿದ ಪ್ರಶ್ನೆಗಳನ್ನು ಕೇಳಲಾಗಿತ್ತು.
ಅಧಿವೇಶನ ಆರಂಭವಾದಾಗಿನಿಂದ ಮುಂದುವರಿದ ಗದ್ದಲದಿಂದಾಗಿ ರಾಜ್ಯಸಭೆಯ ಒಟ್ಟು ಸಮಯ 78 ಗಂಟೆಗಳು ಮತ್ತು 30 ನಿಮಿಷಗಳಲ್ಲಿ, 60 ಗಂಟೆಗಳು ಮತ್ತು 28 ನಿಮಿಷಗಳು ವ್ಯರ್ಥವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 'ಬೆಳ್ಳಿ ಹುಡುಗಿ' ಬರ್ತ್ಡೇ.. ಮೀರಾಬಾಯಿ ಚಾನುಗೆ ಹುಟ್ಟುಹಬ್ಬದ ಸಂಭ್ರಮ