ನವದೆಹಲಿ: ನಾವು 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತೇವೆ, ಆದರೆ ದೇಶ ವಿಭಜನೆಯ ಆ ನೋವು ಇನ್ನೂ ಭಾರತದ ಎದೆಯನ್ನು ಚುಚ್ಚುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದರು.
75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪಿಎಂ ಮೋದಿ, ಆಗಸ್ಟ್ 14 ರಂದು 'ವಿಭಜನೆಯ ಭಯಾನಕತೆಯ ನೆನಪಿನ ದಿನ' ಆಚರಿಸಲು ಸರ್ಕಾರ ನಿರ್ಧರಿಸಿದೆ. ವಿಭಜನೆ, ಇದು ಕಳೆದ ಶತಮಾನದ ಅತ್ಯಂತ ದೊಡ್ಡ ದುರಂತಗಳಲ್ಲಿ ಒಂದಾಗಿದೆ. ವಿಭಜನೆಯ ಸಮಯದಲ್ಲಿ ಭಾರತದ ಜನರು ಅನುಭವಿಸಿದ ನೋವು ಮತ್ತು ಸಂಕಷ್ಟಗಳನ್ನು ಗೌರವಿಸಲು ನಾವು ಆಗಸ್ಟ್ 14 ಅನ್ನು ವಿಭಜನೆಯ ಭಯಾನಕ ಸ್ಮರಣೆಯ ದಿನವನ್ನಾಗಿ ಆಚರಿಸಲು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
'ಸಬ್ ಕಾ ಪ್ರಯಾಸ್' ಕೂಡ ಬಹಳ ಮುಖ್ಯ
"ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್" - ಇದು ಹೊಸ ಭಾರತದ ಸೃಷ್ಟಿಯನ್ನು ಖಚಿತಪಡಿಸುತ್ತದೆ. ನಮ್ಮ ಎಲ್ಲಾ ಗುರಿಗಳನ್ನು ಸಾಧಿಸಲು 'ಸಬ್ ಕಾ ಪ್ರಯಾಸ್' (ಎಲ್ಲರ ಪ್ರಯತ್ನ) ಕೂಡ ಬಹಳ ಮುಖ್ಯವಾಗಿದೆ. ಪ್ರತಿ ದೇಶದ ಅಭಿವೃದ್ಧಿ ಪಯಣದಲ್ಲಿ ಒಂದು ಸಮಯ ಬರುತ್ತದೆ, ಆಗ ದೇಶವು ಹೊಸ ನಿರ್ಣಯಗಳೊಂದಿಗೆ ಮುಂದುವರಿಯುತ್ತದೆ. ಇಂದು ಭಾರತದ ಅಭಿವೃದ್ಧಿ ಪಯಣದಲ್ಲಿ ಆ ಸಮಯ ಬಂದಿದೆ. ಇಲ್ಲಿಂದ ಅಂದರೆ 'ಅಮೃತ್ ಕಾಲ'ದಿಂದ ಆರಂಭಿಸಿ ಮುಂದಿನ 25 ವರ್ಷಗಳವರೆಗೆ, ಅಂದರೆ ಸ್ವಾತಂತ್ರ್ಯದ 100ನೇ ವರ್ಷದವರೆಗೂ ಇದು ನಮ್ಮನ್ನು ಕರೆದೊಯ್ಯುತ್ತದೆ. ಇದಕ್ಕಾಗಿ ಎಲ್ಲರೂ ಕಠಿಣ ಪರಿಶ್ರಮ ಹಾಗೂ ಪ್ರಯತ್ನ ಪಡಬೇಕಾಗಿದೆ ಎಂದು ಮೋದಿ ಕರೆ ನೀಡಿದರು.
ಇದನ್ನೂ ಓದಿ: ದೇಶವು ಸ್ವಾತಂತ್ರ್ಯ ಹೋರಾಟಗಾರರಿಗೆ ಋಣಿಯಾಗಿದೆ: ಕೆಂಪು ಕೋಟೆಯಲ್ಲಿ ಪಿಎಂ ಮೋದಿ ಭಾಷಣ
ಸರ್ಕಾರದ ಪ್ರಯತ್ನದಿಂದಾಗಿ ಕಳೆದ 7 ವರ್ಷಗಳಲ್ಲಿ ಆರಂಭವಾದ ಅನೇಕ ಯೋಜನೆಗಳ ಪ್ರಯೋಜನಗಳು ಕೋಟ್ಯಂತರ ಬಡವರ ಮನೆ ಬಾಗಿಲಿಗೆ ತಲುಪಿವೆ. 21ನೇ ಶತಮಾನದಲ್ಲಿ ಭಾರತದ ಸಾಮರ್ಥ್ಯಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕಿದೆ. ಇದಕ್ಕಾಗಿ, ನಾವು ಹಿಂದುಳಿದ ಜನರು, ಬುಡಕಟ್ಟು ಜನಾಂಗದವರು ಹಾಗೂ ದುರ್ಬಲ ವರ್ಗಗಳಿಗೆ ಸಂಪೂರ್ಣವಾಗಿ ಮೂಲಭೂತ ಸೌಕರ್ಯ ಒದಗಿಸಬೇಕಿದೆ. ಅಭಿವೃದ್ಧಿ ಅಂತರ್ಗತವಾಗಿರಬೇಕು. ಈಶಾನ್ಯ ಪ್ರದೇಶ, ಹಿಮಾಲಯ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಕರಾವಳಿ ಪ್ರದೇಶ ಮತ್ತು ಬುಡಕಟ್ಟು ಪ್ರದೇಶಗಳು ಭವಿಷ್ಯದಲ್ಲಿ ಭಾರತದ ಅಭಿವೃದ್ಧಿಗೆ ಅಡಿಪಾಯವಾಗುತ್ತವೆ ಎಂದು ಹೇಳಿದರು.