ನವದೆಹಲಿ: ಸಂಸತ್ ಚಳಿಗಾಲದ ಅಧಿವೇಶನದ ವೇಳೆ ಲೋಕಸಭೆಗೆ ನುಗ್ಗಿ, ಸ್ಮೋಕ್ ಗ್ಯಾಸ್ ಸಿಡಿಸಿದ್ದ ಆರೋಪಿಗಳಿಗೆ ನಾರ್ಕೊ ಮತ್ತು ಪಾಲಿಗ್ರಾಫ್ ಪರೀಕ್ಷೆ ನಡೆಸಲಾಗುತ್ತಿದೆ. ಐವರನ್ನು ನ್ಯಾಯಾಲಯದ ಆದೇಶದ ಮೇರೆಗೆ ದೆಹಲಿ ಪೊಲೀಸ್ ವಿಶೇಷ ದಳ ಗುಜರಾತ್‌ನ ಅಹಮದಾಬಾದ್ಗೆ ಕರೆದೊಯ್ದಿದೆ.
ಸಂಸತ್ತಿನ ಭದ್ರತಾ ಲೋಪದ ಪ್ರಕರಣದ 6 ಆರೋಪಿಗಳ ಪೈಕಿ ಐವರ ಪಾಲಿಗ್ರಾಫ್ ಮತ್ತು ನಾರ್ಕೋ ಅನಾಲಿಸಿಸ್ ಟೆಸ್ಟ್ ನಡೆಸಲಾಗುತ್ತಿದೆ. ಸಾಗರ್ ಶರ್ಮಾ, ಮನೋರಂಜನ್ ಡಿ, ಅಮೋಲ್ ಶಿಂಧೆ, ಲಲಿತ್ ಝಾ ಮತ್ತು ಮಹೇಶ್ ಕುಮಾವತ್ಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಿದರೆ, ಸಾಗರ್ ಮತ್ತು ಮನೋರಂಜನ್ಗೆ ನಾರ್ಕೋ ಅನಾಲಿಸಿಸ್ ಮತ್ತು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳನ್ನು ನಡೆಸಲು ನ್ಯಾಯಾಲಯ ಆದೇಶಿಸಿದೆ.
ದೆಹಲಿ ಪೊಲೀಸರು ಈಗಾಗಲೇ ಆರೋಪಿಗಳಿಗೆ ಅಹಮದಾಬಾದ್ನಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಯನ್ನು ಆರಂಭಿಸಿದ್ದಾರೆ. ಶುಕ್ರವಾರದ ವೇಳೆಗೆ ಸಂಪೂರ್ಣ ಪ್ರಕ್ರಿಯೆ ಮುಗಿಯುವ ನಿರೀಕ್ಷೆ ಇದೆ. ಈ ಸಂಚಿನ ಪ್ರಮುಖ ಸೂತ್ರಧಾರ ಮನೋರಂಜನ್ ಡಿ ಎಂದು ಪೊಲೀಸರು ಶಂಕಿಸಿದ್ದಾರೆ. ಈತನ ನಿರ್ದೇಶನದ ಮೇರೆಗೆ ಸಾಗರ್ ಶರ್ಮಾ ಸಂಸತ್ತಿನೊಳಕ್ಕೆ ನುಗ್ಗಿದ್ದ ಎಂದು ಹೇಳಲಾಗಿದೆ.
ತನಿಖೆ ವೇಳೆ ಆರೋಪಿಗಳಿಂದ ಬಿಗ್ ಟ್ವಿಸ್ಟ್: ಈ ಹಿಂದೆ ದೆಹಲಿ ಪೊಲೀಸರು ಎಲ್ಲ ಆರೋಪಿಗಳಿಗೆ 'ಮನೋವಿಶ್ಲೇಷಣೆ' ಪರೀಕ್ಷೆ ನಡೆಸಿದ್ದರು. ಈ ವೇಳೆ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದ್ದ ಲಲಿತ್ ಝಾ ವಿಚಾರಣೆ ವೇಳೆ ಬಿಗ್ ಟ್ವಿಸ್ಟ್ ನೀಡಿದ್ದ. ಸಂಸತ್ ಭದ್ರತಾ ಲೋಪದ ನಿಜವಾದ ಮಾಸ್ಟರ್ ಮೈಂಡ್ ಮನೋರಂಜನ್ ಎಂದು ಹೇಳಿಕೆ ನೀಡಿದ್ದ.
ಆರೋಪಿ ಮನೋರಂಜನ್ ಸಂಸ್ಥೆಯೊಂದನ್ನು ಆರಂಭಿಸಿದ್ದಾನೆ. ಅದಕ್ಕಾಗಿ ಹಣ ಸಂಗ್ರಹಣೆಗೆ ಇಳಿದಿದ್ದ. ಆ ಸಂಸ್ಥೆಯಲ್ಲಿ ಸಾಗರ್ ಶರ್ಮಾಗೆ ನೇಮಕಾತಿಯ ಜವಾಬ್ದಾರಿಯನ್ನು ನೀಡಿದ್ದ. ಬಳಿಕ ಯುವಕರನ್ನು ಸೇರಿಸಿಕೊಂಡು ದೇಶ ವಿರೋಧ ಕೆಲಸಗಳಿಗಾಗಿ ಬ್ರೈನ್ ವಾಶ್ ಮಾಡುತ್ತಿದ್ದ. ವಿಚಿತ್ರ ಅಂದರೆ ಇಂತಹ ಕೃತ್ಯಗಳಿಗೆ ಕಠಿಣ ಕಾನೂನಾದ ಯುಎಪಿಎ ಹೇರುವ ಕಲ್ಪನೆಯೂ ಇರಲಿಲ್ಲ ಎಂದು ಲಲಿತ್ ಹೇಳಿದ್ದ.
ಇದರಿಂದ ನಿಜವಾಗಿಯೂ ಆರೋಪಿಗಳಲ್ಲಿ ಮಾಸ್ಟರ್ಮೈಂಡ್ ಯಾರು ಎಂಬುದು ಜಿಜ್ಞಾಸೆಯಾಗಿತ್ತು. ಹೀಗಾಗಿ ನಾರ್ಕೊ ಟೆಸ್ಟ್ ನಡೆಸಲು ಕೋರ್ಟ್ಗೆ ದೆಹಲಿ ಪೊಲೀಸರು ಮನವಿ ಮಾಡಿದ್ದರು. ಜೊತೆಗೆ ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ದೇಶವಿರೋಧಿ ಶಕ್ತಿಗಳು ಭಾಗಿಯಾಗಿದ್ದಾರೆಯೇ?, ಇದು ಭಯೋತ್ಪಾದಕ ಚಟುವಟಿಕೆಯೇ ಎಂಬ ಕೋನದಲ್ಲೂ ತನಿಖೆ ನಡೆಸಿ ಮಾಹಿತಿ ಸಂಗ್ರಹಿಸಲು ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ: ಸಂಸತ್ ಭದ್ರತಾ ಲೋಪ ಪ್ರಕರಣ: ಮೈಸೂರಿನಲ್ಲಿ ಮನೋರಂಜನ್ ಸ್ನೇಹಿತರ ವಿಚಾರಣೆ