ನವದೆಹಲಿ: ಮಣಿಪುರ ಘಟನಾವಳಿಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ಸದನಕ್ಕೆ ಬಂದು ಮಾತನಾಡಬೇಕು ಎಂದು ಆಗ್ರಹಿಸಿ ಪ್ರತಿಪಕ್ಷಗಳು ಇಂದೂ ಕೂಡಾ ಪ್ರತಿಭಟನೆ ಮುಂದುವರಿಸಿದ್ದು ಲೋಕಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ. ಕಲಾಪ ಆರಂಭಕ್ಕೂ ಮುನ್ನ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಸದನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದಾದ ನಂತರ ಪ್ರತಿಪಕ್ಷಗಳು ಪ್ರತಿಭಟನೆ ಪ್ರಾರಂಭಿಸಿದವು. ಪ್ರಶ್ನೋತ್ತರ ಕಲಾಪದ ವೇಳೆ ಮಣಿಪುರ ವಿಷಯ ಪ್ರಸ್ತಾಪಿಸಿದ ವಿಪಕ್ಷ ಸದಸ್ಯರು ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಇನ್ನು ಕೆಲವು ಸದಸ್ಯರು ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಿದರು.
ಈ ನಡುವೆ ಸ್ಪೀಕರ್ ಓಂ ಬಿರ್ಲಾ ಪ್ರತಿಭಟನಾನಿರತ ವಿಪಕ್ಷ ಸದಸ್ಯರಿಗೆ, ಎಲ್ಲ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚಿಸಲಾಗುತ್ತದೆ. ಅಲ್ಲಿಯವರೆಗೂ ತಾಳ್ಮೆಯಿಂದಿದ್ದು ಸದನದ ಘನತೆ ಕಾಪಾಡುವಂತೆ ಕೋರಿದರು. ಇದೇ ವೇಳೆ ಮಣಿಪುರ ವಿಷಯದ ಬಗ್ಗೆ ಚರ್ಚಿಸಲು ಪ್ರತಿಪಕ್ಷಗಳು ಬಯಸುವುದಿಲ್ಲವೇ? ಎಂದು ಕೇಳಿದರು. ವಿಪಕ್ಷಗಳ ಗದ್ದಲದ ನಡುವೆ 20 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮೂರು ಪ್ರಶ್ನೆಗಳು ಮತ್ತು ಅವುಗಳ ಪೂರಕಗಳನ್ನು ಪಡೆಯಲಾಯಿತು. ಪ್ರತಿಭಟನೆ ಮುಂದುವರಿಸಿದ್ದರಿಂದ ಕಲಾಪವನ್ನು ಮೊದಲು ಮಧ್ಯಾಹ್ನ 12ಕ್ಕೆ ಮುಂದೂಡಲಾಯಿತು. ಮತ್ತೆ ಗದ್ದಲ ಮುಂದುವರೆದು ಇದೀಗ ಮಧ್ಯಾಹ್ನ 2ಕ್ಕೆ ಮುಂದೂಡಲಾಗಿದೆ.
ಇಂದು ಪ್ರಶ್ನೋತ್ತರ ವೇಳೆಯಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ ಮತ್ತು ಪ್ರಲ್ಹಾದ್ ಜೋಶಿ ಸೇರಿದಂತೆ ಹಲವರು ಸದನದಲ್ಲಿ ಉಪಸ್ಥಿತರಿದ್ದರು. ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿರುವ ಕಾರಣ ಸಂಸತ್ತಿನ ಕಲಾಪಕ್ಕೆ ಅಡ್ಡಿಯಾಗುತ್ತಿದೆ.
ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆ: ಏತನ್ಮಧ್ಯೆ, ಮಣಿಪುರ ಹಿಂಸಾಚಾರದ ವಿಷಯವಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸ್ಪೀಕರ್ಗೆ ಈ ಕುರಿತ ಪ್ರಸ್ತಾವನೆ ಸಲ್ಲಿಸಿದರು.
ಇದನ್ನೂ ಓದಿ: ದೆಹಲಿ ನಾಗರಿಕ ಸೇವೆಗಳ ಕುರಿತ ಸುಗ್ರೀವಾಜ್ಞೆ ಬದಲಿಸುವ ಮಸೂದೆಗೆ ಕೇಂದ್ರ ಅನುಮೋದನೆ