ನವದೆಹಲಿ: ಪೆಗಾಸಸ್ ಸಾಫ್ಟ್‌ವೇರ್ ಬಳಸಿ ಪತ್ರಕರ್ತರು ಮತ್ತು ರಾಜಕೀಯ ಮುಖಂಡರು ಅಕ್ರಮವಾಗಿ ಗೂಢಾಚರ್ಯೆ ಮಾಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಅಧ್ಯಕ್ಷತೆಯಲ್ಲಿ ಸಂಸದೀಯ ಸ್ಥಾಯಿ ಸಮಿತಿಯು, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳನ್ನು ಪ್ರಶ್ನಿಸಲಿದೆ. ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಸಭೆಯನ್ನು ಜುಲೈ 28 ರಂದು ಕರೆಯಲಾಗಿದೆ. ಈ ವೇಳೆ ಮಾಹಿತಿ ತಂತ್ರಜ್ಞಾನ, ಗೃಹ ಮತ್ತು ಸಂವಹನ ಸಚಿವಾಲಯದ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ.
'ನಾಗರಿಕರ ದತ್ತಾಂಶ ಸುರಕ್ಷತೆ ಮತ್ತು ಗೌಪ್ಯತೆ' ಎಂಬ ವಿಷಯದ ಕುರಿತು 'ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಗೃಹ ವ್ಯವಹಾರ ಸಚಿವಾಲಯ ಮತ್ತು ಸಂವಹನ ಸಚಿವಾಲಯ (ದೂರಸಂಪರ್ಕ ಇಲಾಖೆ) ದ ಪ್ರತಿನಿಧಿಗಳ ಪುರಾವೆಗಳು ಸಭೆಯ ಕಾರ್ಯಸೂಚಿಯಾಗಿದೆ. ಸಭೆ ಸಂಜೆ 4 ಗಂಟೆಗೆ ಪ್ರಾರಂಭವಾಗಲಿದೆ. ಪ್ರಕರಣ ಬೆಳಕಿಗೆ ಬಂದಾಗಿನಿಂದ, ಹಲವಾರು ವಿರೋಧ ಪಕ್ಷದ ನಾಯಕರು ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಪೆಗಾಸಸ್ ಸ್ಪೈವೇರ್ ಬಳಸುವ ಅಪರಿಚಿತ ಏಜೆನ್ಸಿಯ ಕಣ್ಗಾವಲು ಸಂಭಾವ್ಯ ಗುರಿಗಳ ಪಟ್ಟಿಯಲ್ಲಿ 40 ಕ್ಕೂ ಹೆಚ್ಚು ಭಾರತೀಯ ಪತ್ರಕರ್ತರ ಹೆಸರುಗಳು ಕಾಣಿಸಿಕೊಂಡ ನಂತರ ಈ ಬೆಳವಣಿಗೆ ಕಂಡು ಬಂದಿದೆ ಎಂದು ದಿ ವೈರ್ ಭಾನುವಾರ ವರದಿ ಮಾಡಿತ್ತು.
ವರದಿಯ ಪ್ರಕಾರ, ಹಿಂದೂಸ್ತಾನ್ ಟೈಮ್ಸ್, ದಿ ಹಿಂದೂ, ಇಂಡಿಯಾ ಟುಡೇ, ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ನೆಟ್‌ವರ್ಕ್ 18 ಸೇರಿದಂತೆ ದೇಶದ ಕೆಲವು ಸುದ್ದಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರನ್ನು ಗುರಿಯಾಗಿಸಲಾಗಿದೆ. ಇದರಲ್ಲಿ ರಕ್ಷಣಾ, ಗೃಹ ಸಚಿವಾಲಯ, ಚುನಾವಣಾ ಆಯೋಗ ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳು ಒಳಗೊಂಡಿವೆ ಎಂಬ ಮಾಹಿತಿ ಹೊರ ಬಿದ್ದಿದೆ.