ಕಡಪ (ಆಂಧ್ರಪ್ರದೇಶ): ಇಲ್ಲಿನ ರಾಯಚೋಟಿ ಪಟ್ಟಣದ 20 ವರ್ಷದ ಯುವತಿಗೆ ಆಕೆಯ ಪೋಷಕರೇ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರ ಪ್ರಕಾರ, ಯುವತಿ ತನ್ನ ಪೋಷಕರ ಇಚ್ಛೆಯಂತೆ ಮದುವೆಯಾಗಲು ನಿರಾಕರಿಸಿದ್ದಳು. ತಾನು ಬೇರೊಬ್ಬನನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದ್ದು, ಆತನನ್ನೇ ಮದುವೆಯಾಗುವುದಾಗಿ ಯುವತಿ ಹಠ ಹಿಡಿದಿದ್ದಳು.
ರಾಯಚೋಟಿ ಸರ್ಕಲ್ ಇನ್ಸ್‌ಪೆಕ್ಟರ್ ರಾಜು ಅವರು ಈ ಬಗ್ಗೆ ಹೇಳಿದ್ದಿಷ್ಟು "ರಾಯಚೋಟಿ ಪಟ್ಟಣದ ಕೊಥಪಳ್ಳಿ ಪ್ರದೇಶದ 20 ವರ್ಷದ ತಾಸಿಮ್ ಅವರು ನಮಗೆ ನೀಡಿದ ಹೇಳಿಕೆಯಲ್ಲಿ, ಆಕೆಯ ಪೋಷಕರು ತಮ್ಮ ಮಗಳಿಗೆ ಮದುವೆ ಮಾಡಿಸಲು ಬಹುಕಾಲದಿಂದ ಸಂಬಂಧ ಹುಡುಕುತ್ತಿದ್ದರು. ಆದರೆ, ಯುವತಿ ಎಲ್ಲ ಸಂಬಂಧಗಳನ್ನು ತಿರಸ್ಕರಿಸಿದ್ದು, ತಾನು ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದ್ದಳು.
ಆದರೆ, ಅವಳ ಹೆತ್ತವರು ಪ್ರೀತಿಯನ್ನು ವಿರೋಧಿಸಿದರು ಮತ್ತು ಬೇರೊಬ್ಬರನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರು. ಈ ಕಾರಣದಿಂದಾಗಿ ಮನೆಯಲ್ಲಿ ಅನೇಕ ಜಗಳಗಳು ನಡೆದಿದ್ದವು ಮತ್ತು ಜಗಳ ಮುಂದುವರಿದು, ಯುವತಿಯ ಪೋಷಕರು ಮತ್ತು ಕಿರಿಯ ಸಹೋದರ ತಜುದ್ದೀನ್ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಯುವತಿಯ ಸಹೋದರಿ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
"ಮಾಹಿತಿಯ ಮೇರೆಗೆ, ನಾವು ಆಸ್ಪತ್ರೆಗೆ ತೆರಳಿ ಆಕೆಯ ಹೇಳಿಕೆಯನ್ನು ದಾಖಲಿಸಿದ್ದೇವೆ. ಮಹಿಳೆಯ ಪೋಷಕರು ಮತ್ತು ಕಿರಿಯ ಸಹೋದರನ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ. ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ" ಎಂದು ಪೊಲೀಸರು ತಿಳಿಸಿದ್ದಾರೆ.