ಪಲ್ನಾಡು(ಆಂಧ್ರಪ್ರದೇಶ): ಮಾಚರ್ಲ ತಾಲೂಕು ಪಂಚಾಯತ್ ಪ್ರಭಾರಿ ಜೂಲಕಾಂತಿ ಬ್ರಹ್ಮಾರೆಡ್ಡಿ ನೇತೃತ್ವದಲ್ಲಿ ಪುರಸಭೆ ಕಚೇರಿ ಬಳಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗುತ್ತಿತ್ತು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿಗೆ ಆಗಮಿಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ. ಇದರಿಂದ ಗಲಾಟೆ ಶುರುವಾಗಿದ್ದು, ಪರಸ್ಪರ ಕಲ್ಲು ತೂರಾಟ ಮತ್ತು ದೊಣ್ಣೆಗಳಿಂದ ಎರಡೂ ಪಕ್ಷಗಳ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ.
ವೈಎಸ್‌ಆರ್‌ಸಿಪಿ ಮುಖಂಡರು ಮತ್ತು ಕಾರ್ಯಕರ್ತರು ಸ್ಥಳೀಯ ಟಿಡಿಪಿ ಕಾರ್ಯಕರ್ತರ ಮೇಲೆ ಮೂರು ಗಂಟೆಗೂ ಹೆಚ್ಚು ಕಾಲ ಹಲ್ಲೆ ನಡೆಸಿದ್ದಾರೆ. ಪಲ್ನಾಡು ಜಿಲ್ಲೆಯ ಮಾಚರ್ಲ ಪಟ್ಟಣ ಹೊತ್ತಿ ಉರಿದಿದೆ. ಟಿಡಿಪಿ ಕ್ಷೇತ್ರದ ಉಸ್ತುವಾರಿ ಜೂಲಕಾಂತಿ ಬ್ರಹ್ಮಾರೆಡ್ಡಿ ಸೇರಿದಂತೆ ಮುಖಂಡರು, ಕಾರ್ಯಕರ್ತರು ಸಿಕ್ಕ ಸಿಕ್ಕವರನ್ನು ಥಳಿಸಿದ್ದಾರೆ. ಬ್ರಹ್ಮಾರೆಡ್ಡಿ ಅವರ ಮನೆ, ಪಕ್ಷದ ಕಚೇರಿ, ಮುಖಂಡರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಪರಿಸ್ಥಿತಿ ಉದ್ವಿಗ್ನವಾಗಿದ್ದು ಹೇಗೆ: ತಾ.ಪಂ. ಕ್ಷೇತ್ರದ ಉಸ್ತುವಾರಿ ಜೂಲಕಾಂತಿ ಬ್ರಹ್ಮಾರೆಡ್ಡಿ ನೇತೃತ್ವದಲ್ಲಿ ಶುಕ್ರವಾರ ಸಂಜೆ ಮಾಚರ್ಲ ರಿಂಗ್ ರಸ್ತೆಯಿಂದ ಪುರಸಭೆ ಕಚೇರಿ ಮುಂಭಾಗದ ಶಾಲೆಯವರೆಗೆ 'ಇದೇಂ ಕರ್ಮ ಮನ ರಾಷ್ಟ್ರಕಿ'(ನಮ್ಮ ರಾಜ್ಯಕ್ಕೆ ಇದೆಂಥ ಸ್ಥಿತಿ) ಎಂಬ ಘೋಷವಾಕ್ಯದಡಿ ಮೆರವಣಿಗೆ ಆಯೋಜಿಸಲಾಗಿತ್ತು. ಇದರಲ್ಲಿ ಟಿಡಿಪಿ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ವಡ್ಡರ ಕಾಲೋನಿಯಿಂದ ವಿರೋಧ ಆರಂಭ: ಮುಖ್ಯರಸ್ತೆಯಿಂದ ಟಿಡಿಪಿ ರ್‍ಯಾಲಿ ವಡ್ಡರ ಕಾಲೋನಿ ಕಡೆಗೆ ಸಾಗುತ್ತದೆ. ಇಲ್ಲಿ ವೈಎಸ್‌ಆರ್‌ಸಿಪಿ ಮುಖಂಡರು ಹಾಗೂ ಕಾರ್ಯಕರ್ತರು ಸರ್ಕಾರದ ಎಲ್ಲ ಯೋಜನೆಗಳನ್ನು ಪಡೆಯುತ್ತಿದ್ದೇವೆ ಎಂದು ರ್‍ಯಾಲಿಯನ್ನು ವಿರೋಧಿಸಿದ್ದಾರೆ. ಮಾಚರ್ಲದ ಮಾಜಿ ಪುರಸಭೆ ಅಧ್ಯಕ್ಷ ಹಾಗೂ ಸ್ಥಳೀಯ ವೈ.ಎಸ್.ಆರ್.ಸಿ.ಪಿ ಪುರಸಭಾ ಸದಸ್ಯ ವಡ್ಡರ ಸಮಾಜದ ಮುಖಂಡ ತುರಕ ಕಿಶೋರ್ ನೇತೃತ್ವದಲ್ಲಿ ವಿರೋಧ ವ್ಯಕ್ತವಾಗಿದೆ.
ಅಲ್ಲದೇ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಕಲ್ಲು, ದೊಣ್ಣೆ, ಮಾರಕಾಯುಧಗಳಿಂದ ಟಿಡಿಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಓಡಿಸಲು ಯತ್ನಿಸಿದ್ದಾರೆ. ಈ ವೇಳೆ ಕ್ಷೇತ್ರ ಉಸ್ತುವಾರಿ ಬ್ರಹ್ಮಾರೆಡ್ಡಿ ಅವರನ್ನು ತಳ್ಳಿದ್ದು ಅಲ್ಲದೇ ಹಲ್ಲೆ ಮಾಡಲು ಯತ್ನಿಸಲಾಯಿತು. ಈ ಸಮಯದಲ್ಲಿ ಟಿಡಿಪಿ ಕಾರ್ಯಕರ್ತರೂ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಕೆಲವು ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಗಾಯಗೊಂಡರು. ಈ ವೇಳೆ ಪೊಲೀಸರು ಎರಡೂ ಪಕ್ಷಗಳ ಕಾರ್ಯಕರ್ತರನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ವಿರೋಧ ವ್ಯಕ್ತವಾದ ನಂತರ ಪೊಲೀಸರು ಘಟನೆ ಹತೋಟಿಗೆ ತರಲು ಬ್ರಹ್ಮಾ ರೆಡ್ಡಿ ಅವರಿಗೆ ಗುಂಟೂರಿಗೆ ಹೋಗುವಂತೆ ಸಲಹೆ ನೀಡಿದ್ದಾರೆ. ಆದರೆ ಈ ಮಾತನ್ನು ಕೇಳದೇ ಕಾರ್ಯಕ್ರಮ ಮುಂದುವರೆಸಿದ್ದರಿಂದ ಕಲಹ ತಾರಕಕ್ಕೇರಿದೆ. ನಂತರ ಪೊಲೀಸರು ಬ್ರಹ್ಮಾ ರೆಡ್ಡಿಯನ್ನು ಬಂಧಿಸಿ ಗುಂಟೂರಿಗೆ ಕಳುಹಿಸಿದ್ದಾರೆ.
ಬ್ರಹ್ಮಾರೆಡ್ಡಿ ಅವರ ಮನೆಗೆ ಬೆಂಕಿ: ಕ್ಷೇತ್ರದ ಮೂಲೆ ಮೂಲೆಗಳಿಂದ ಮಾಚರ್ಲಕ್ಕೆ ಬರುತ್ತಿದ್ದ ಟಿಡಿಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಸೊಸೈಟಿ ಕಾಲೋನಿಯಲ್ಲಿದ್ದ ಬ್ರಹ್ಮಾರೆಡ್ಡಿ ಅವರ ಮನೆ ಧ್ವಂಸಗೊಳಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಅವರ ಮನೆ ಹಾಗೂ ಪಕ್ಷದ ಕಚೇರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಅಗ್ನಿಶಾಮಕ ದಳ ಸಕಾಲಕ್ಕೆ ತಲುಪಲಿಲ್ಲ. ವೈಎಸ್‌ಆರ್‌ಸಿಪಿ ದಾಳಿಯಿಂದ ಟಿಡಿಪಿ ಮುಖಂಡರ ವಾಹನಗಳು ಮತ್ತು ಮನೆಗಳು ಧ್ವಂಸಗೊಂಡಿವೆ.
ಅಕ್ರಮ ಕೇಸು ಹಾಕಿ ಜೈಲಿಗೆ ಕಳುಹಿಸುವ ಯತ್ನ: ಮಾಚರ್ಲ ತಾ.ಪಂ ಪ್ರಭಾರಿ ಜೂಲಕಾಂತಿ ಬ್ರಹ್ಮಾರೆಡ್ಡಿ ಮಾತನಾಡಿ, ಆಡಳಿತ ಪಕ್ಷದ ಪ್ರತಿನಿಧಿಗಳು ಹಾಗೂ ಪೊಲೀಸರು ತಮ್ಮ ವಿರುದ್ಧ ಅಕ್ರಮ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲು ಯತ್ನಿಸುತ್ತಿದ್ದಾರೆ. ಆರೋಪಿಗಳಿಗೆ ಶಿಕ್ಷೆಯಾಗದಿದ್ದರೂ, ಟಿಡಿಪಿ ಶ್ರೇಣಿಯ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಮಾಚರ್ಲ ಭಾಗದಲ್ಲಿ ಗ್ರಾನೈಟ್ ಲಾರಿ ಅಕ್ರಮ ಸಾಗಾಟ ನಡೆಯುತ್ತಿದ್ದು, ಗಾಂಜಾ, ಮದ್ಯ ಮಾರಾಟ ಮಾಡಲಾಗುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇವುಗಳ ಬಗ್ಗೆ ದೂರು ಕೊಡಲು ಠಾಣೆಗೆ ಹೋದರೆ ಯಾವ ಪಕ್ಷ ಎಂದು ಕೇಳಿ ಕೇಸ್ ದಾಖಲಿಸುತ್ತಾರೆ ಎಂದು ಆರೋಪಿಸಿದ್ದಾರೆ.
ಪೊಲೀಸರು ಏನು ಮಾಡುತ್ತಿದ್ದರು: ಟಿಡಿಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ಅವರು ಪಲ್ನಾಡು ಜಿಲ್ಲೆಯ ಮಾಚಾರ್‌ನಲ್ಲಿ ಟಿಡಿಪಿ ಶ್ರೇಣಿಯ ಮೇಲೆ ವೈಎಸ್‌ಆರ್‌ಸಿಪಿ ಮುಖಂಡರು ಮತ್ತು ಕಾರ್ಯಕರ್ತರು ನಡೆಸಿದ ದಾಳಿ ಮತ್ತು ವಿಧ್ವಂಸಕ ಕೃತ್ಯಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಆಡಳಿತ ಪಕ್ಷದ ರೌಡಿಸಂ ಮತ್ತು ವೈಎಸ್‌ಆರ್‌ಸಿಪಿ ಗೂಂಡಾಗಳ ದಾಳಿಗೆ ಪೊಲೀಸರ ಬೆಂಬಲವಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ವೈಎಸ್ಆರ್ ಕಾಂಗ್ರೆಸ್-ಟಿಡಿಪಿ ಕಾರ್ಯಕರ್ತರ ಮಾರಾಮಾರಿ: ಕಚೇರಿಗೆ ಬೆಂಕಿ, ಮನೆಗಳ ಮೇಲೆ ದಾಳಿ