ಚೆನ್ನೈ: ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ವಿರುದ್ಧ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾವೇರಿ ವಿಚಾರದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ರಾಜ್ಯದ ಜನರ ಬಗ್ಗೆ ಕಾಳಜಿ ಇದೆಯೇ ಎಂದು ಪ್ರಶ್ನಿಸಿದ್ದಾರೆ. ತಮ್ಮ ಕುಟುಂಬ ಸದಸ್ಯರು ಕರ್ನಾಟಕದಲ್ಲಿ ನಡೆಸುತ್ತಿರುವ ವ್ಯವಹಾರಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಡಿಎಂಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸುತ್ತಿದೆ ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಪಳನಿಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಕೈಗೊಂಬೆ ಸಿಎಂ ಆಗಿರುವ ಸ್ಟಾಲಿನ್ಗೆ ದೂರದೃಷ್ಟಿಯೇ ಇಲ್ಲ. ಜೂನ್ 12 ರಿಂದಲೇ ಸೇಲಂನ ಮೆಟ್ಟೂರು ಅಣೆಕಟ್ಟಿನಿಂದ ಸಿಎಂ ನೀರು ಬಿಡುಗಡೆ ಮಾಡಿದ್ದಾರೆ. ಸರ್ಕಾರದ ಭರವಸೆಯನ್ನು ನಂಬಿ ಕಾವೇರಿ ಅಚ್ಚುಕಟ್ಟು ಪ್ರದೇಶದ ಸುಮಾರು 1.50 ಲಕ್ಷ ರೈತರು 5 ಲಕ್ಷ ಎಕರೆ ಭೂಮಿಯಲ್ಲಿ ಅಲ್ಪಾವಧಿಯ 'ಕುರುವೈ' ಬೆಳೆಯನ್ನು ಬೆಳೆದಿದ್ದಾರೆ. ಆದರೆ ಈಗ 3.50 ಲಕ್ಷ ಎಕರೆಯಲ್ಲಿನ ಬೆಳೆಗಳು ಒಣಗುತ್ತಿವೆ ಮತ್ತು ಉಳಿದವುಗಳನ್ನು ಬಾವಿ ನೀರಿನ ನೀರಾವರಿಯಿಂದ ಉಳಿಸಿಕೊಳ್ಳಲಾಗುತ್ತಿದೆ ಎಂದು ಪಳನಿಸ್ವಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಕ್ಷ ಆಡಳಿತ ನಡೆಸಲು ಬಾರದ ಸರ್ಕಾರ ಇನ್ನೇನು ಮಾಡುತ್ತದೆ? ಮೆಟ್ಟೂರು ಅಣೆಕಟ್ಟಿನಿಂದ ಬಿಡುಗಡೆ ಮಾಡುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಿ, ಕಾನೂನಿನ ಪ್ರಕಾರ ಮತ್ತು ರಾಜಕೀಯ ಒತ್ತಡದ ಮೂಲಕ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರಿನ ಪಾಲನ್ನು ಖಚಿತಪಡಿಸಿಕೊಳ್ಳಬೇಕಿತ್ತು ಎಂದು ಅವರು ಹೇಳಿದರು.
ಗಾಢ ನಿದ್ರೆಯಲ್ಲಿ ಡಿಎಂಕೆ ಸರ್ಕಾರ ಮೆಟ್ಟೂರು ಅಣೆಕಟ್ಟಿನಲ್ಲಿದ್ದ ನೀರನ್ನು ಬಳಸಿಕೊಂಡಿತು. ಆದರೆ ಇದಕ್ಕಾಗಿ ಕೇಂದ್ರದತ್ತ ಬೆರಳು ತೋರಿಸಿತು. ಆದರೆ ಈ ವಿಷಯದಲ್ಲಿ ರಚನಾತ್ಮಕವಾಗಿ ಏನನ್ನೂ ಮಾಡಲಿಲ್ಲ. ಸ್ಟಾಲಿನ್ ಅವರಿಗೆ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ಸೇರಿದಂತೆ ರಾಜ್ಯದ ಜನರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ, ಜೂನ್ನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಬೆಂಗಳೂರಿಗೆ ಹೋದಾಗ ಅವರು ಈ ವಿಷಯದ ಬಗ್ಗೆ ಮಾತುಕತೆ ನಡೆಸಬೇಕಿತ್ತು ಎಂದು ಮಾಜಿ ಸಿಎಂ ಪಳನಿಸ್ವಾಮಿ ಹೇಳಿದರು.
ಕರ್ನಾಟಕದ ಜಲಾಶಯಗಳಲ್ಲಿ ಸಾಕಷ್ಟು ಸಂಗ್ರಹವಿದ್ದಾಗ ಸಿಎಂ ಸ್ಟಾಲಿನ್ ಕರ್ನಾಟಕದೊಂದಿಗೆ ಸ್ನೇಹಪರ ಮಾತುಕತೆ ನಡೆಸಿ ನೀರು ಬಿಡುಗಡೆ ಮಾಡಿಕೊಳ್ಳಬಹುದಿತ್ತು. ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳನ್ನು ಹೊಂದಿರುವ I.N.D.I.A ಮೈತ್ರಿಕೂಟದಲ್ಲಿ ಮುಂದುವರಿಯಲು ಕಾವೇರಿ ನೀರಿನ ಬಿಡುಗಡೆಯ ಬಗ್ಗೆ ಷರತ್ತು ವಿಧಿಸಬಹುದಿತ್ತು ಅವರು ಹೇಳಿದರು.
ಈ ಸರ್ಕಾರ ಈಗಲಾದರೂ ರೈತರ ಬಗ್ಗೆ ಕಾಳಜಿ ತೋರಿಸಬೇಕು, ಸರ್ವಪಕ್ಷ ಸಭೆ ಕರೆದು ಕಾವೇರಿ ವಿಷಯದಲ್ಲಿ ತಮಿಳುನಾಡಿನ ಹಕ್ಕುಗಳನ್ನು ಎತ್ತಿಹಿಡಿಯಲು ಮತ್ತು ರಾಜ್ಯಕ್ಕೆ ನೀರು ಒದಗಿಸಲು ದೃಢವಾದ ಹೆಜ್ಜೆ ಇಡಬೇಕು ಎಂದು ಎಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ : ಸಾರ್ವಜನಿಕ ವಿನಾಶಕಾರಿ ಆಯುಧವಾಗುತ್ತಿರುವ 'ಸೋಷಿಯಲ್ ಮೀಡಿಯಾ': ಬಾಂಬೆ ಹೈಕೋರ್ಟ್ ಜಡ್ಜ್