ಶ್ರೀನಗರ, ಜಮ್ಮು-ಕಾಶ್ಮೀರ : ಸಿಆರ್ಪಿಎಫ್, ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶ್ರೀನಗರ ಪೊಲೀಸರು ನೀಡಿದ ನಿಖರ ಮಾಹಿತಿಯನ್ನು ಆಧರಿಸಿ, ಶ್ರೀನಗರದ ಥೀಡ್ ಹರ್ವಾನ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಮೊದಲಿಗೆ ಶರಣಾಗತನಾಗುವಂತೆ ಭಯೋತ್ಪಾದಕನಿಗೆ ಸೂಚನೆ ನೀಡಲಾಗಿತ್ತು.
ಸೂಚನೆ ತಿರಸ್ಕರಿಸಿದ ಭಯೋತ್ಪಾದಕ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ ಕಾರಣದಿಂದಾಗಿ ಸೇನೆಯೂ ಕೂಡ ಗುಂಡು ಹಾರಿಸಿ, ಭಯೋತ್ಪಾದಕನನ್ನು ಹೊಡೆದುರುಳಿಸಿದೆ.
ಸಾವನ್ನಪ್ಪಿದ ಉಗ್ರನನ್ನು ಶಫೀಉಲ್ಲಾ ಅಲಿಯಾಸ್ ಅಬು ಖಾಲಿದ್ ಎಂದು ಗುರುತಿಸಲಾಗಿದೆ. ಅಬು ಖಾಲಿದ್ ಪಾಕಿಸ್ತಾನದ ಕರಾಚಿ ಮೂಲದವನು ಎಂದು ತಿಳಿದು ಬಂದಿದೆ. ಲಷ್ಕರ್ ಏ ತೋಯ್ಬಾ ಉಗ್ರಗಾಮಿ ಸಂಘಟನೆಯಲ್ಲಿ ಸಕ್ರಿಯನಾಗಿದ್ದನು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2016ರಲ್ಲಿ ಬಂಡಿಪೋರಾ ಸೆಕ್ಟರ್ನಿಂದ ಆತ ದೇಶದೊಳಗೆ ನುಸುಳಿದ್ದು, ಶ್ರೀನಗರ ಜಿಲ್ಲೆಯಲ್ಲಿ ಅವಿತಿದ್ದ. ಇದರೊಂದಿಗೆ ಪಾಕಿಸ್ತಾನದಲ್ಲಿರುವ ಲಷ್ಕರ್ ಏ ತೋಯ್ಬಾ ಕಮಾಂಡರ್ಗಳ ಆದೇಶದಂತೆ ಪುಲ್ವಾಮಾ, ಶ್ರೀನಗರ, ಗಂದೇರ್ಬಾಲ್, ಬದ್ಗಾಂನಲ್ಲಿ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಕೊಂಡಿದ್ದನು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಕಾಶ್ಮೀರ ನಗರವೊಂದರಲ್ಲೇ 33 ದಿನಗಳಲ್ಲಿ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆ ಮಾಹಿತಿ ನೀಡಿದೆ. ಕೆಲವು ದಿನಗಳ ಹಿಂದಷ್ಟೇ ಇಬ್ಬರು ಉಗ್ರರನ್ನು ಕುಲ್ಗಾಂನಲ್ಲಿ ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು.
ಇದನ್ನೂ ಓದಿ: ಕಚ್ಚಾ ವಸ್ತು ಬೆಲೆ ಏರಿಕೆ ಖಂಡಿಸಿ ನಾಳೆ ಕೈಗಾರಿಕೆಗಳು ಬಂದ್