ಅಹಮದಾಬಾದ್(ಗುಜರಾತ್): ದೇಶಾದ್ಯಂತ ಸಡಗರ-ಸಂಭ್ರಮದಿಂದ ರಕ್ಷಾ ಬಂಧನ ಆಚರಣೆ ಮಾಡಲಾಗ್ತಿದೆ. ಈ ಪವಿತ್ರ ಹಬ್ಬದಂದು ಸಹೋದರಿ ತನ್ನ ಸಹೋದರನ ಕೈ ಮಣಿಕಟ್ಟಿನ ಮೇಲೆ ರಾಖಿ ಕಟ್ಟಿ, ಅವರ ದೀರ್ಘಾಯುಷ್ಯಕ್ಕೆ ಹಾರೈಸುತ್ತಾಳೆ. ಇದೀಗ ಪಾಕಿಸ್ತಾನದ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿಗೆ ರಾಖಿ ಕಳುಹಿಸಿದ್ದಾರೆ. ಅಷ್ಟೇ ಅಲ್ಲ, 2024ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಭಾರತದ ಪ್ರಧಾನಿಯಾಗುವಂತೆ ಹರಸಿದ್ದಾರೆ.

ಪಾಕಿಸ್ತಾನದ ಖಮರ್ ಮೊಹ್ಸಿನ್ ಶೇಖ್ ಎಂಬ ಮಹಿಳೆ ಕಳೆದ 27 ವರ್ಷಗಳಿಂದಲೂ ನರೇಂದ್ರ ಮೋದಿ ಅವರಿಗೆ ರಾಖಿ ಕಳುಹಿಸುತ್ತಿದ್ದಾರೆ. ಸಿಲ್ಕ್ ರಿಬ್ಬನ್ ಮತ್ತು ಕಸೂತಿ ವಿನ್ಯಾಸದಿಂದ ಕೂಡಿದ ವಿಶೇಷ ರಾಖಿ ಇದಾಗಿದೆ. ಕೋವಿಡ್ನಿಂದಾಗಿ ಕಳೆದ ಎರಡು ವರ್ಷಗಳಿಂದ ಮೋದಿ ಅವರಿಗೆ ರಾಖಿ ಕಟ್ಟಲು ಸಾಧ್ಯವಾಗಿರಲಿಲ್ಲ. ಆದರೆ, ಮರೆಯದೆ ರಾಖಿ ಕಳುಹಿಸಿಕೊಡುತ್ತಿದ್ದಾರೆ.

ಈ ಸಲ ಅವರು ನನ್ನನ್ನು ದೆಹಲಿಗೆ ಕರೆಯಿಸುತ್ತಾರೆ ಎಂಬ ಭರವಸೆ ನನ್ನಲ್ಲಿದೆ ಎಂದು ಖಮರ್ ಮೊಹ್ಸಿನ್ ಶೇಖ್ ತಿಳಿಸಿದ್ದಾರೆ. ಭಾರತೀಯ ಮೂಲದ ವ್ಯಕ್ತಿಯನ್ನು ಇವರು ವರಿಸಿದ್ದಾರೆ.