ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಿಂದ ಭಾರತಕ್ಕೆ ನುಸುಳಲು ಯತ್ನಿಸಿರುವ 2 ಪ್ರತ್ಯೇಕ ಪ್ರಯತ್ನಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ವಿಫಲಗೊಳಿಸಿದ್ದಾರೆ. ಓರ್ವ ಪಾಕಿಸ್ತಾನಿ ನುಸುಳುಕೋರನ ಹತ್ಯೆಗೈಯ್ಯಲಾಗಿದ್ದು, ಮತ್ತೋರ್ವನನ್ನು ಬಂಧಿಸಲಾಗಿದೆ ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.
ಜಮ್ಮುವಿನ ಅರ್ನಿಯಾ ಸೆಕ್ಟರ್ ಮತ್ತು ಸಾಂಬಾ ಜಿಲ್ಲೆಯ ರಾಮಗಢ ಸೆಕ್ಟರ್‌ನಲ್ಲಿ ಮುಂಜಾನೆ ಒಳನುಸುಳುವಿಕೆ ಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ. ಅರ್ನಿಯಾ ಸೆಕ್ಟರ್‌ನಲ್ಲಿನ ಗಡಿ ಬೇಲಿಯತ್ತ ಆಕ್ರಮಣಕಾರಿಯಾಗಿ ಬರುತ್ತಿರುವುದನ್ನು ಗಮನಿಸಿದ ಬಿಎಸ್‌ಎಫ್, ನುಸುಳುಕೋರನ ಮೇಲೆ ಗುಂಡಿನ ದಾಳಿ ನಡೆಸಿತು. ಇದಕ್ಕೂ ಮೊದಲು ಆತನಿಗೆ ನಿಲ್ಲುವಂತೆ ಸೂಚನೆ ನೀಡಲಾಗಿತ್ತು. ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಭದ್ರತಾ ಪಡೆಗಳು ಗುಂಡು ಹಾರಿಸಿ ಹತ್ಯೆಗೈದಿವೆ.
ಮತ್ತೊಂದು ಘಟನೆಯಲ್ಲಿ, ರಾಮ್‌ಗಢ್ ಸೆಕ್ಟರ್‌ನಲ್ಲಿ ಗಡಿ ರೇಖೆ ದಾಟಿದ ನಂತರ ಫೆನ್ಸಿಂಗ್‌ಗೆ ಬಂದ ಪಾಕಿಸ್ತಾನಿ ನುಸುಳುಕೋರನನ್ನು ಭದ್ರತಾ ಪಡೆಗಳು ಬಂಧಿಸಿವೆ. ಸದ್ಯ ಎರಡೂ ವಲಯಗಳ ಸಂಪೂರ್ಣ ಪ್ರದೇಶವನ್ನು ಕೂಲಂಕಷವಾಗಿ ಶೋಧಿಸಲಾಗುತ್ತಿದೆ.
ಇದನ್ನೂ ಓದಿ: ಜಮ್ಮು: ಅಂತಾರಾಷ್ಟ್ರೀಯ ಗಡಿಯಲ್ಲಿ ನುಸುಳುಕೋರನ ಹತ್ಯೆ