ಪೂಂಚ್(ಜಮ್ಮು ಕಾಶ್ಮೀರ): ಸ್ನಾನಕ್ಕೆಂದು ನದಿಗಿಳಿದಾಗ ಮುಳುಗಿ ನೀರು ಪಾಲಾಗಿದ್ದ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಬಾಲಕನ ಮೃತದೇಹ ಪಾಕಿಸ್ತಾನದಲ್ಲಿ ಪತ್ತೆಯಾಗಿದೆ. ಇಂದು ಪಾಕ್ ಅಧಿಕಾರಿಗಳು ಬಾಲಕನ ಮೃತದೇಹವನ್ನು ಭಾರತಕ್ಕೆ ಹಸ್ತಾಂತರಿಸಿದ್ದಾರೆ.
ಪೂಂಚ್ ಜಿಲ್ಲೆಯ ಸುರನಕೋಟೆ ನಿವಾಸಿ ಜಮೀನ್ ರಸೂಲ್ ಮೃತ ಬಾಲಕ. ರಸೂಲ್ ಮೇ 3 ರಂದು ಇಲ್ಲಿನ ಎಸ್‌ಕೆ ಸೇತುವೆ ಬಳಿಯ ಪುಲಾಸ್ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಮುಳುಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ. ರಕ್ಷಣಾ ತಂಡಗಳು ಬಾಲಕನ ಮೃತದೇಹವನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸುತ್ತಿದ್ದರು.
ಪಾಕ್ ಆಕ್ರಮಿತ ಕಾಶ್ಮೀರದ ಟೆಟ್ರಿನೋಟ್ ಪ್ರದೇಶದಲ್ಲಿ ಬಾಲಕನ ಮೃತದೇಹವನ್ನು ಕಂಡ ಪಾಕಿಸ್ತಾನ ಸೇನೆ ಬಳಿಕ ಭಾರತೀಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಾಲಕನ ಬಗ್ಗೆ ಮಾಹಿತಿ ದೃಢಪಟ್ಟ ನಂತರ ಪೂಂಚ್‌ನ ಎಲ್‌ಒಸಿಯಲ್ಲಿ ಉಭಯ ದೇಶಗಳ ಅಧಿಕಾರಿಗಳ ಸಮ್ಮುಖದಲ್ಲಿ ಬಾಲಕನ ಶವವನ್ನು ವಶಕ್ಕೆ ಪಡೆಯಲಾಯಿತು. ಕಾನೂನಾತ್ಮಕ ವಿಚಾರಣೆಯ ಬಳಿಕ ಅಂತಿಮ ವಿಧಿ-ವಿಧಾನಗಳಿಗಾಗಿ ಬಾಲಕನ ಕುಟುಂಬಕ್ಕೆ ಮೃತದೇಹವನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.