ಇಸ್ಲಾಮಾಬಾದ್: 2019 ರ ಆಗಸ್ಟ್ 5 ರ ಪೂರ್ವದ ಜಮ್ಮು ಮತ್ತು ಕಾಶ್ಮೀರದ ಸ್ಥಿತಿಯನ್ನು ಪುನಃ ಸ್ಥಾಪಿಸಿದರೆ ಪಾಕಿಸ್ತಾನ ಭಾರತದೊಂದಿಗೆ ಮಾತುಕತೆಗೆ ತಯಾರಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಭಾರತವು ಆಗಸ್ಟ್ 5, 2019 ರಂದು 370 ನೇ ವಿಧಿ ಅನ್ವಯ ದೊರೆತಿದ್ದ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತು. ಬಳಿಕ ಅದನ್ನು ಲಡಾಕ್, ಜಮ್ಮು ಕಾಶ್ಮೀರ ಎಂಬೆರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು.
"ಈಗಿನ ಸನ್ನಿವೇಶದಲ್ಲಿ ಪಾಕಿಸ್ತಾನವು ಭಾರತದೊಂದಿಗಿನ ತನ್ನ ಸಂಬಂಧವನ್ನು ಪುನಶ್ಚೇತನಗೊಳಿಸಿದರೆ, ಅದು ಕಾಶ್ಮೀರಿಗಳಿಗೆ ನಮ್ಮ ಬೆನ್ನು ತೋರಿಸಿದಂತೆ ಆಗಲಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸದೆ ಇದ್ದರೆ ಮಾತುಕತೆ ನಡೆಸುವುದು ಕಾಶ್ಮೀರಿಗಳಿಗೆ ನೀಡುತ್ತಿರುವ ಬೆಂಬಲವನ್ನು ವಾಪಸ್ ಪಡೆದಂತಾಗುತ್ತದೆ. ಆದ ಕಾರಣ ಆಗಸ್ಟ್ 5 ರಂದು ಭಾರತ ಕೈಗೊಂಡಿರುವ ಕ್ರಮಗಳನ್ನು ಹಿಂಪಡೆದರೆ ಖಂಡಿತವಾಗಿಯೂ ನಾವು ಮಾತುಕತೆ ನಡೆಸಲು ಸಿದ್ಧರಾಗಿದ್ದೇವೆ" ಎಂದು ನೇರ ಪ್ರಶ್ನೋತ್ತರ ಅವಧಿಯಲ್ಲಿ ಖಾನ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ದೇಶವು ತನ್ನ ಆಂತರಿಕ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದೆ. ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರವಿಲ್ಲದ ವಾತಾವರಣದಲ್ಲಿ ತನ್ನೊಂದಿಗೆ ನೆರೆಯ ದೇಶ ಸಾಮಾನ್ಯ ಸಂಬಂಧವನ್ನು ಬಯಸಬೇಕು. ಭಯೋತ್ಪಾದನೆ ಮತ್ತು ಹಗೆತನವಿಲ್ಲದ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ ಎಂದು ಭಾರತ ಈಗಾಗಲೇ ತಿಳಿಸಿದೆ.
2016ರಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳು ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲೆ ಮೇಲೆ ನಡೆಸಿದ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದೆಗೆಟ್ಟಿತ್ತು. ಉರಿಯ ಭಾರತೀಯ ಸೇನಾ ಶಿಬಿರದ ಮೇಲೂ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ದಾಳಿ ನಡೆಸಿರುವುದು ಸಂಬಂಧವನ್ನು ಮತ್ತಷ್ಟು ಹಾಳು ಮಾಡಿತು.
ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತದ ಯುದ್ಧ ವಿಮಾನಗಳು 2019 ರ ಫೆಬ್ರವರಿ 26 ರಂದು ಪಾಕಿಸ್ತಾನದೊಳಗಿನ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ತರಬೇತಿ ಶಿಬಿರವನ್ನು ಹೊಡೆದ ನಂತರ ಉಭಯ ದೇಶಗಳ ನಡುವಿನ ಸಂಬಂಧ ಬೆಂಕಿ ಮುಚ್ಚಿದ ಕೆಂಡದಂತಾಯಿತು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಅಧಿಕಾರವನ್ನು ಹಿಂತೆಗೆದುಕೊಳ್ಳುವುದಾಗಿ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವುದಾಗಿ ಭಾರತ ಘೋಷಿಸಿದ ನಂತರ ಮತ್ತಷ್ಟು ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿತ್ತು.
ಕಳೆದ ಫೆಬ್ರವರಿ ತಿಂಗಳಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ ಪುನಃ ಸ್ಥಾಪಿಸಲು ಉಭಯ ದೇಶಗಳು ಒಪ್ಪಿಕೊಂಡ ಬಳಿಕ ದ್ವಿಪಕ್ಷೀಯ ಬಾಂಧವ್ಯದಲ್ಲಿ ಸ್ವಲ್ಪ ಸುಧಾರಣೆಯಾಗಿದೆ. ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರತಿಸ್ಪರ್ಧಿ ಅಧಿಕಾರಿಗಳು ಬ್ಯಾಕ್ ಚಾನೆಲ್ ರಾಜತಾಂತ್ರಿಕತೆಯ ಮೂಲಕ ಸಂವಹನ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕಾಶ್ಮೀರಕ್ಕೆ ಸ್ವಾಯತ್ತತೆ ಸಿಗುವ ತನಕ ಭಾರತದ ಜತೆ ಸದ್ಯಕ್ಕೆ ವ್ಯಾಪಾರವಿಲ್ಲ: ಪಾಕ್ ಪ್ರಧಾನಿ ಖಾನ್