ಜೈಪುರ(ಒಡಿಶಾ): ಕೋವಿಡ್ ಸೋಂಕಿಗೊಳಗಾಗಿ ನವೆಂಬರ್ 30ರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 104 ವರ್ಷದ ಪದ್ಮಶ್ರೀ ಪುರಸ್ಕೃತ ನಂದಾ ಸರ್ ಖ್ಯಾತಿಯ ನಂದಕಿಶೋರ್ ಪ್ರಸ್ಟಿ ವಿಧಿವಶರಾಗಿದ್ದಾರೆ.
2020ನೇ ಸಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಇವರು, ತಮ್ಮ ಊರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಂದಾ ಮಾಸ್ಟರ್ ಚತ್ಸಾಲಿ ಎಂದೇ ಚಿರಪರಿಚಿತರಾಗಿದ್ದರು. ಕಳೆದ 75 ವರ್ಷಗಳಿಂದ ತಮ್ಮ ಗ್ರಾಮದ ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ಉಚಿತವಾಗಿ ಪಾಠ ಮಾಡುತ್ತಿದ್ದರು. ಗ್ರಾಮದಲ್ಲಿ ಅನಕ್ಷರತೆಯನ್ನು ನಿರ್ಮೂಲನೆ ಮಾಡುವ ಉದ್ದೇಶವನ್ನಿಟ್ಟುಕೊಂಡಿದ್ದ ಇವರು, 100ರ ಹರೆಯದಲ್ಲೂ ಮರದ ಕೆಳಗೆ ಕುಳಿತು ಮಕ್ಕಳಿಗೆ ಪಾಠ ಹೇಳುವ ಕಾರ್ಯ ಮುಂದುವರೆಸಿದ್ದರು.
ಒಡಿಶಾದ ಜೈಪುರ ಜಿಲ್ಲೆಯ ಕಂಠೀರ ಗ್ರಾಮದಲ್ಲಿ ನಂದಾ ಮಾಸ್ಟರ್ ಮಕ್ಕಳಿಗೆ ಹಾಗೂ ಹಿರಿಯ ಅನಕ್ಷರಸ್ಥ ನಾಗರಿಕರಿಗೆ ಅಕ್ಷರ ಹೇಳಿಕೊಡುವ ತಮ್ಮ ಚತ್ಸಾಲಿ ಸಂಪ್ರದಾಯವನ್ನು ಮುಂದುವರಿಸಿದ್ದರು. ಸುಮಾರು 7 ದಶಕಗಳಿಂದ ಗ್ರಾಮದ ಹನುಮಾನ್ ದೇವಸ್ಥಾನದ ಬಳಿ ಇರುವ ಮರದ ಕೆಳಗೆ ಈ ಚತ್ಸಾಲಿ ನಡೆಯುತ್ತಿತ್ತು.
ಇದನ್ನೂ ಓದಿರಿ: ನವಜಾತ ಶಿಶು ಹತ್ಯೆ ಮಾಡಿ, ಟಾಯ್ಲೆಟ್ ಫ್ಲಶ್ನಲ್ಲಿ ಶವ ಎಸೆದ ಪಾಪಿ ತಾಯಿ
1946 ರಿಂದಲೂ ನಂದಾ ಸರ್ ಉಚಿತವಾಗಿ ಶಿಕ್ಷಣ ನೀಡುವ ಕಾಯಕವನ್ನು ಮಾಡಿಕೊಂಡು ಬಂದಿದ್ದರು. ತಮ್ಮ ಚತ್ಸಾಲಿ ಮೂಲಕ 3,000 ಸಾವಿರಕ್ಕೂ ಅಧಿಕ ಮಕ್ಕಳ ಭವಿಷ್ಯ ರೂಪಿಸಿದ್ದಾರೆ. ಅವರು ನಿಸ್ವಾರ್ಥ ಸೇವೆಗಾಗಿ ಭಾರತದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀಯನ್ನು ಮುಡಿಗೇರಿಸಿಕೊಂಡಿದ್ದರು.