ಹೈದರಾಬಾದ್: ಮುಂಬರುವ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಚುನಾವಣೆಗೂ ಮುನ್ನ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರನ್ನು ಭೇಟಿಯಾಗಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿಯ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ ಓವೈಸಿ ಭೇಟಿ ನೀಡಿದ್ದಾರೆ. ಮುಂಬರುವ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಹೆಚ್ಎಂಸಿ) ಚುನಾವಣೆ ಗಮನದಲ್ಲಿಟ್ಟುಕೊಂಡು ಉಭಯ ನಾಯಕರ ನಡುವಿನ ಸಭೆ ಮಹತ್ವ ಪಡೆದುಕೊಂಡಿದೆ.
ಇಬ್ಬರು ತಮ್ಮ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆಂದು ತಿಳಿದುಬಂದಿದೆ. ಓವೈಸಿಯ ಅಖಿಲ ಭಾರತ ಮಜ್ಲಿಸ್-ಎ-ಇತ್ತೇಹದುಲ್ ಮುಸ್ಲೀಮೀನ್ (ಎಐಐಎಂಐಎಂ) ಪಕ್ಷ, ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಎರಡೂ ಉತ್ತಮ ಬಾಧವ್ಯ ಹೊಂದಿವೆ.
ಚುನಾವಣಾ ಆಯೋಗ ನವೆಂಬರ್ 13ರ ನಂತರ ಯಾವುದೇ ಸಮಯದಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ. 2016 ರ ಜಿಹೆಚ್‌ಎಂಸಿ ಚುನಾವಣೆಯಲ್ಲಿ ಒಟ್ಟು 150 ಸ್ಥಾನಗಳ ಪೈಕಿ, ಟಿಆರ್‌ಎಸ್ 99 ಸ್ಥಾನಗಳನ್ನು ಗಳಿಸುವ ಮೂಲಕ ಭರ್ಜರಿ ಜಯ ಸಾಧಿಸಿತ್ತು. ಎಐಎಂಐಎಂ 40 ಸ್ಥಾನಗಳನ್ನು ಪಡೆದು ಎರಡನೇ ಅತಿದೊಡ್ಡ ಪಕ್ಷವಾಗಿದೆ.
ಸಮೀಕ್ಷೆಗಳಲ್ಲಿ ಹೊರ ಬಂದ ವ್ಯತಿರಿಕ್ತ ಫಲಿತಾಂಶದಿಂದಾಗಿ ಕೆಸಿಆರ್-ಓವೈಸಿ ಮಾತುಕೆ ನಡೆಸಿದ್ದಾರೆ ಎನ್ನಲಾಗ್ತಿದೆ. ಇತ್ತೀಚೆಗೆ ನಡೆದ ದುಬಾಕ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಿದ್ದು, ಟಿಆರ್‌ಎಸ್ ಹಿನ್ನಡೆ ಅನುಭವಿಸಿದೆ.