ಗುವಾಹಟಿ (ಅಸ್ಸೋಂ): ರಣಭೀಕರ ಪ್ರವಾಹದಿಂದಾಗಿ ಅಸ್ಸೋಂ ತತ್ತರಿಸಿ ಹೋಗಿದೆ. ಈಗ ಹೆಚ್ಚುತ್ತಿರುವ ಮಳೆಯಿಂದ ಪ್ರವಾಹ ಪರಿಸ್ಥಿತಿ ಇನ್ನಷ್ಟು ಹದಗೆಡಿಸಿದೆ. ಇದುವರೆಗೆ ಪ್ರವಾಹದಿಂದ ಪೀಡಿತವಾದ 26 ಜಿಲ್ಲೆಗಳಲ್ಲಿ 4 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೆ ಸಿಲುಕಿದ್ದಾರೆ. ಮೃತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
ರಾಜ್ಯದ ಕ್ಯಾಚಾರ್, ಹೋಜೈ, ಲಖಿಂಪುರ, ನಾಗಾಂವ್, ದರ್ರಾಂಗ್, ದಿಬ್ರುಗಢ ಮತ್ತು ದಿಮಾ ಹಸ್ಸಾವೊ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಆತಂಕಕಾರಿಯಾಗಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ಸುಮಾರು 1,089 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿದ್ದು, ಹೆಚ್ಚಿನ ಪ್ರದೇಶಗಳು ಮುಳುಗಡೆಯಾಗಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರಿಗೆ ಸಂಕಷ್ಟಕ್ಕೆ ಸ್ಪಂದಿಸಲು 178 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ನಿರಂತರ ಮಳೆಯಿಂದ ಸಾಕಷ್ಟು ಭೂಕುಸಿತ ಉಂಟಾಗಿದೆ. ಇದರಿಂದ ಬರಾಕ್ ಕಣಿವೆ, ದಿಮಾ ಹಸಾವೊ ಜಿಲ್ಲೆ ಮತ್ತು ನೆರೆಯ ರಾಜ್ಯಗಳಾದ ತ್ರಿಪುರಾ, ಮಿಜೋರಾಂ ಮತ್ತು ಮಣಿಪುರದ ಸಂಪರ್ಕಗಳು ಕಡಿತಗೊಂಡಿವೆ. ಅಸ್ಸೋಂ ಮಾತ್ರವಲ್ಲ, ಮೇಘಾಲಯದ ಅನೇಕ ಸ್ಥಳಗಳಲ್ಲಿ ರಸ್ತೆಗಳು ಮತ್ತು ರೈಲು ಹಳಿಗಳು ಕೊಚ್ಚಿಕೊಂಡು ಹೋಗಿವೆ. ಇತ್ತ, ಪ್ರವಾಹ ಪರಿಸ್ಥಿತಿ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ.
ಇದನ್ನೂ ಓದಿ: ಒಂದೇ ಮಳೆಗೆ ತತ್ತರಿಸಿದ ಬೆಂಗಳೂರು ಜನ: ಟ್ಯಾಕ್ಸ್ ಕಟ್ಟೋದು ಈ ರೀತಿ ಕಷ್ಟ ಪಡೋದಕ್ಕಾ ಎಂದು ಆಕ್ರೋಶ