ನವದೆಹಲಿ: 2011ರ ಜನಗಣತಿಯ ಪ್ರಕಾರ ಭಾರತದಲ್ಲಿ 4 ಲಕ್ಷಕ್ಕೂ ಹೆಚ್ಚು ಭಿಕ್ಷುಕರು ಇದ್ದಾರೆ. ಅದರಲ್ಲಿ ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಅಂದರೆ 81,244 ಭಿಕ್ಷುಕರು ಇದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಖಾತೆ ಸಚಿವ ತವಾರ್ ಚಂದ್ ಗೆಹ್ಲೋಟ್ ರಾಜ್ಯಸಭೆಗೆ ತಿಳಿಸಿದ್ದಾರೆ.
ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಉತ್ತರಿಸಿದ ಅವರು 2011ರ ಜನಗಣತಿಯ ಪ್ರಕಾರ, 2,21,673 ಪುರುಷರು ಮತ್ತು 1,91,997 ಮಹಿಳೆ ಭಿಕ್ಷುಕರು ಸೇರಿದಂತೆ 4,13,670 ಭಿಕ್ಷುಕರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಪಶ್ಚಿಮ ಬಂಗಾಳ 81,224 ಭಿಕ್ಷುಕರೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಉತ್ತರಪ್ರದೇಶದಲ್ಲಿ 65,835 ಭಿಕ್ಷುಕರು, ಆಂಧ್ರಪ್ರದೇಶದಲ್ಲಿ 30,218, ಬಿಹಾರದಲ್ಲಿ 29,723, ಮಧ್ಯಪ್ರದೇಶದಲ್ಲಿ 28,695, ರಾಜಸ್ಥಾನದಲ್ಲಿ 25,853. ದೆಹಲಿಯಲ್ಲಿ 2,187 ಭಿಕ್ಷುಕರು ಇದ್ದಾರೆ. ಇನ್ನು ಚಂಡೀಗಡದಲ್ಲಿ ಕೇವಲ 121 ಭಿಕ್ಷುಕರು ಇದ್ದಾರೆ ಎಂದು ವರದಿ ಸಲ್ಲಿಸಿದ್ದಾರೆ.
ಲಕ್ಷದ್ವೀಪದಲ್ಲಿ ಕೇವಲ ಇಬ್ಬರು ಭಿಕ್ಷುಕರು ಇದ್ದರೆ, ದಾದ್ರಾ ನಗರ ಹವೇಲಿ, ದಮನ್ ಮತ್ತು ದಿಯು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಕ್ರಮವಾಗಿ 19, 22 ಮತ್ತು 56 ಅಲೆಮಾರಿಗಳನ್ನು ಹೊಂದಿವೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.