ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪದೇ ಪದೇ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ನಡುವೆ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿ ಮತ್ತು ದೇಶಾದ್ಯಂತ ಶಾಸಕರು ಮತ್ತು ಸಂಸದರ ಡೇಟಾ ಸಂಗ್ರಹಿಸುವ ಸರ್ಕಾರೇತರ ಸಂಸ್ಥೆಯಾದ ಪ್ರಜಾ ಫೌಂಡೇಶನ್ ಇತ್ತೀಚೆಗೆ ವರದಿಯೊಂದನ್ನು ಬಿಡುಗಡೆ ಮಾಡಿದೆ.
ಎಎಪಿಯ 22 ಶಾಸಕರು ಓದಿದ್ದು 12ನೇ ತರಗತಿ: ದೆಹಲಿ ವಿಧಾನಸಭೆಯಲ್ಲಿರುವ 62 ಎಎಪಿ ಶಾಸಕರಲ್ಲಿ 22 ಮಂದಿ 12ನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದಾರೆ ಎಂದು ಆ ವರದಿಯಲ್ಲಿ ತಿಳಿಸಲಾಗಿದೆ. ವರದಿ ಪ್ರಕಾರ, ಪ್ರಸ್ತುತ ಎಎಪಿ ಶಾಸಕರಲ್ಲಿ ಶೇಕಡಾ 33ಕ್ಕಿಂತ ಹೆಚ್ಚು ಶಾಸಕರು ಪದವಿ ಮುಗಿಸಿಲ್ಲ ಎಂಬುದಾಗಿ ತಿಳಿದುಬಂದಿದೆ. ಕನಿಷ್ಠ ವಿದ್ಯಾವಂತ ಎಂಎಲ್ಎ ಅಂದರೆ ಅದು ಎಎಪಿ ಶಾಸಕ ಅಬ್ದುಲ್ ರೆಹಮಾನ್, ಇವರು ಎಂಟನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದಾರೆ. ನಂತರದ ಕನಿಷ್ಠ ಓದಿನ ಸ್ಥಾನ ನರೇಶ್ ಬಲ್ಯಾನ್ ಅವರದ್ದು, ಇವರು ಓದಿದ್ದು, ಕೇವಲ ಒಂಬತ್ತನೇ ತರಗತಿ. ಎಎಪಿಯ ಫೈರ್‌ಬ್ರಾಂಡ್ ನಾಯಕ ಎಂದು ಕರೆಯಲ್ಪಡುವ ಬಲ್ಯಾನ್ ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿಯನ್ನು ಟೀಕಿಸುತ್ತಲೇ ಇರುತ್ತಾರೆ.
ಕೇಜ್ರಿವಾಲ್ ಓದಿದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್ - ಬಿ.ಟೆಕ್: ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ, ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ವಿದ್ಯಾಭ್ಯಾಸ ಮಾಡಿದ್ದಾರೆ. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಹೊಂದಿದ್ದರೆ. ಮಾಜಿ ಸಚಿವ ಸತ್ಯೇಂದ್ರ ಜೈನ್ ವಾಸ್ತುಶಿಲ್ಪದಲ್ಲಿ ಪದವಿ ಪಡೆದಿದ್ದಾರೆ. ಎಎಪಿ ಸಚಿವ ಗೋಪಾಲ್ ರೈ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೆ, ಕೈಲಾಶ್ ಗಹ್ಲೋಟ್ ಎಲ್ಎಲ್ಎಂ ಪದವಿ ಪಡೆದುಕೊಂಡಿದ್ದಾರೆ. ಮತ್ತೊಬ್ಬ ಎಎಪಿ ಸಚಿವ ಅತಿಶಿ ಎಂಎಸ್‌ಸಿ ಮಾಡಿದ್ದಾರೆ. ಸೌರಭ್ ಭಾರದ್ವಾಜ್ ಬಿ. ಟೆಕ್ ಪದವಿ ಪಡೆದಿದ್ದಾರೆ.
ದೆಹಲಿ ವಿಧಾನಸಭೆಯ ಬಿಜೆಪಿ ಶಾಸಕರ ವಿದ್ಯಾಭ್ಯಾಸವೇನು?: ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಬಗ್ಗೆ ಹೇಳುವುದಾದರೆ, ಕೇಸರಿ ಪಕ್ಷವು ಎಂಟು ಶಾಸಕರನ್ನು ಹೊಂದಿದೆ. ಅವರಲ್ಲಿ ಮೋಹನ್ ಸಿಂಗ್ ಬಿಶ್ತ್ 12 ನೇ ತರಗತಿಯವರೆಗೆ ಓದಿದ್ದಾರೆ. ಇನ್ನುಳಿದವರೆಲ್ಲರೂ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ.
ಇತ್ತೀಚಿಗೆ ಕೇಜ್ರಿವಾಲ್ ಅವರು ಪ್ರಧಾನಿಯವರ ಶೈಕ್ಷಣಿಕ ಅರ್ಹತೆಯ ಬಗ್ಗೆ ನಿರಂತರವಾಗಿ ತಮ್ಮ ಧ್ವನಿ ಎತ್ತುತ್ತಿದ್ದಾರೆ. ಏಕೆಂದರೆ ದೇಶದ ಪ್ರಧಾನಿ ಶಿಕ್ಷಣ ಪಡೆದುಕೊಂಡಿರುವುದು ಮುಖ್ಯವಲ್ಲವೇ ಎಂದು ಅವರು ಪ್ರಶ್ನೆ ಮಾಡಿದ್ದರು.
ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ ವಿಧಿಸಿದ್ದ ಹೈಕೋರ್ಟ್: ಪ್ರಧಾನಿ ಮೋದಿ ಅವರ ಪದವಿಯ ಮಾಹಿತಿಯನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ನೀಡುವಂತೆ ಗುಜರಾತ್ ವಿಶ್ವವಿದ್ಯಾಲಯಕ್ಕೆ ಸೂಚನೆ ನೀಡಿದ್ದ ಕೇಂದ್ರ ಮಾಹಿತಿ ಆಯೋಗದ ಆದೇಶವನ್ನು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿತ್ತು. ಜೊತೆಗೆ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡವನ್ನು ಹೈಕೋರ್ಟ್ ವಿಧಿಸಿತ್ತು.
ಇದನ್ನೂ ಓದಿ: ಆಕಾಂಕ್ಷಾ ದುಬೆ ಆತ್ಮಹತ್ಯೆ ಪ್ರಕರಣ: ಗಾಯಕ ಸಮರ್ ಸಿಂಗ್ ವಿರುದ್ಧ ಲುಕ್ ಔಟ್ ನೋಟಿಸ್..!