ಸೂರತ್ (ಗುಜರಾತ್): ಗುಜರಾತ್ನ ಸೂರತ್‌ನಲ್ಲಿ ಒಂದು ಸಾವಿರ ಕೆಜಿಗೂ ಹೆಚ್ಚು ನಕಲಿ ತುಪ್ಪ ವಶಪಡಿಸಿಕೊಳ್ಳಲಾಗಿದೆ. ಕಲಬೆರಕೆ ಮಾಡಿದ್ದ ಈ ತುಪ್ಪವನ್ನು ಆನ್ಲೈನ್ನಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕಿಮ್ ತಾಲೂಕಿನ ಕುದ್ಸದ್ ಗ್ರಾಮದ ಮೆಹುಲ್ ಪಟೇಲ್ ಎಂಬುವವರು ನಕಲಿ ತುಪ್ಪ ವ್ಯಾಪಾರ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸೂರತ್ ಪೊಲೀಸರು ಮಂಗಳವಾರ ಸಂಜೆ 1,072 ಕೆಜಿ ನಕಲಿ ತುಪ್ಪ ವಶಪಡಿಸಿಕೊಂಡಿದ್ದಾರೆ.
ಡೈರಿ ಫಾರ್ಮ್ ಮತ್ತು ಗೋ ಶಾಲೆಯ ಮಾಲೀಕ ಎಂದು ಹೇಳಿಕೊಳ್ಳುತ್ತಿದ್ದ ಮೆಹುಲ್ ಪಟೇಲ್ ತಮ್ಮ ತೋಟದ ಹಿತ್ತಲಿನಲ್ಲಿ ಕಾರ್ಖಾನೆಯನ್ನು ನಡೆಸುತ್ತಿದ್ದರು. ಅಲ್ಲಿ ತಾಳೆ ಎಣ್ಣೆ, ಸಾರ ಮತ್ತು ಸ್ವಲ್ಪ ಶುದ್ಧ ತುಪ್ಪ ಕಡಿಮೆ ಬೆಲೆಯ ತರಕಾರಿ ತುಪ್ಪಕ್ಕೆ ಬೆರೆಸುತ್ತಿದ್ದರು. ನಂತರ ಅದನ್ನೇ ಕಾಮಧೇನು ಡೈರಿ ಉತ್ಪನ್ನದ ಹೆಸರಿನಲ್ಲಿ ಮರು ಪ್ಯಾಕ್ ಮಾಡುತ್ತಿದ್ದರು.
ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಜಿಯೋ ಮಾರ್ಟ್, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳಲ್ಲಿ ಶುದ್ಧ ತುಪ್ಪು ಎಂದು ಹೇಳಿ ಮಾರಾಟ ಮಾಡುತ್ತಿದ್ದರು ಎಂದು ಕಿಮ್ ಪೊಲೀಸ್ ಇನ್ಸ್‌ಪೆಕ್ಟರ್ ಜೆ.ಎಸ್.ರಜಪೂತ್ ತಿಳಿಸಿದ್ದಾರೆ.
ಆರೋಪಿಯು ಕಡಿಮೆ ಬೆಲೆಯ ತರಕಾರಿ ತುಪ್ಪ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದ. ಅದನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಸದ್ಯ ಎರಡೂ ತುಪ್ಪದ ಮಾದರಿಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಕಲಬೆರಕೆ ಎಂದು ಖಚಿತವಾದಲ್ಲಿ ಪಟೇಲ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಬಂಧಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಕಲಿ ಹಾವಳಿಗೆ ಬ್ರೇಕ್ ಹಾಕಲು ನಂದಿನಿ ತುಪ್ಪದ ಪ್ಯಾಕಿಂಗ್ ವಿನ್ಯಾಸ ಬದಲಿಸಲು ಚಿಂತನೆ!