ನವದೆಹಲಿ : ಭದ್ರತೆಗಾಗಿ 2018 ರಿಂದ 2020ರವರೆಗಿನ 2 ವರ್ಷದ ಅವಧಿಯಲ್ಲಿ ದೇಶದ 1 ಲಕ್ಷಕ್ಕೂ ಅಧಿಕ ಜನರನ್ನು ಭಾರತೀಯ ಸೇನೆಗೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಜ್ಯಸಭೆಗೆ ತಿಳಿಸಿದರು.
ಸೇನಾ ನೇಮಕಾತಿ ಬಗ್ಗೆ ಸಂಸತ್ತಿಗೆ ಮಾಹಿತಿ ನೀಡಿದ ಅವರು, 2 ವರ್ಷಗಳಲ್ಲಿ ಸೇನೆಗೆ 1,34,003 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. 2021-22ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಅವಧಿಯಲ್ಲಿ ಭಾರತೀಯ ನೌಕಾಪಡೆಗೆ 20,272, ವಾಯುಪಡೆಗೆ 27,116 ನೇಮಕ ಮಾಡಿಕೊಳ್ಳಲಾಗಿದೆ. ಭಾರತೀಯ ಸಶಸ್ತ್ರ ಪಡೆಗಳ ಮಾನವಶಕ್ತಿಯ ಅಗತ್ಯತೆಗೆ ಅನುಗುಣವಾಗಿ ನೇಮಕಾತಿಗಳನ್ನು ಕೈಗೊಳ್ಳಲಾಗಿದೆ ಎಂದು ರಾಜನಾಥ್ ಸಿಂಗ್ ಸಂಸತ್ತಿಗೆ ಲಿಖಿತ ಉತ್ತರ ನೀಡಿದ್ದಾರೆ.
ಇನ್ನು ಇದೇ ವೇಳೆ ರಕ್ಷಣಾ ಸಚಿವಾಲಯದ ರಾಜ್ಯ ಸಚಿವ ಅಜಯ್ ಭಟ್ ಈ ಬಗ್ಗೆ ಪ್ರತ್ಯೇಕ ಉತ್ತರ ನೀಡಿದ್ದು, ಕೊರೊನಾ ಸೋಂಕಿನ ಕಾರಣ ಸೇನಾ ನೇಮಕಾತಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕೊರೊನಾ ನಿಯಮಗಳನ್ನು ಪಾಲಿಸಲು ನೇಮಕಾತಿ ಮೇಳಗಳನ್ನು ನಡೆಸಲಾಗಿಲ್ಲ. ನೇಮಕಾತಿ ವೇಳೆ ಜನಸಂದಣಿ ಹೆಚ್ಚುವುದರಿಂದ ಕೊರೊನಾ ಮತ್ತಷ್ಟು ವ್ಯಾಪಿಸುವ ಕಾರಣ ಅದನ್ನು ತಡೆಗಟ್ಟಲು ನೇಮಕ ಪ್ರಕ್ರಿಯೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಮುಂದಿನ ದಿನಗಳಲ್ಲಿ ನೇಮಕಾತಿ ಮತ್ತೆ ನಡೆಯಲಿದೆ ಎಂದು ಭರವಸೆ ನೀಡಿದ್ದಾರೆ.
ಓದಿ: ಪದ್ಮ ಪ್ರಶಸ್ತಿ 2022 : ಸಿಡಿಎಸ್ ಜ.ಬಿಪಿನ್ ರಾವತ್‌ಗೆ ಮರಣೋತ್ತರ ಪದ್ಮ ವಿಭೂಷಣ ; ಪುತ್ರಿಯರಿಗೆ ಪ್ರಶಸ್ತಿ ಪ್ರದಾನ