ಕೋಯಿಕ್ಕೋಡ್ (ಕೇರಳ): ಕೇರಳ ವಿಧಾನಸಭಾ ಸ್ಪೀಕರ್ ಮತ್ತು ಸಿಪಿಎಂ ನಾಯಕ ಎಎನ್ ಶಂಸೀರ್ ಅವರು ಹಿಂದೂ ವಿರೋಧಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದು, ಕಾನೂನು ಮಾರ್ಗ ಆಯ್ಕೆ ಮಾಡಿಕೊಂಡಿರುವ ವಿಶ್ವ ಹಿಂದೂ ಪರಿಷತ್ ಮತ್ತು ಭಾರತೀಯ ಜನತಾ ಪಕ್ಷ, ಶಂಸೀರ್ ವಿರುದ್ಧ ಕೇರಳದಾದ್ಯಂತ ಹಲವು ದೂರುಗಳನ್ನು ದಾಖಲಿಸಲು ನಿರ್ಧರಿಸಿದೆ. ಗಣೇಶನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕೇರಳ ವಿಧಾನಸಭಾ ಸ್ಪೀಕರ್ ಎಎನ್ ಶಂಸೀರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಕೇರಳದಾದ್ಯಂತ ಎಲ್ಲ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲು ವಿಎಚ್‌ಪಿ ನಿರ್ಧರಿಸಿದೆ.
ರಾಜ್ಯದಲ್ಲಿ ಕೋಮು ಘರ್ಷಣೆ ಸೃಷ್ಟಿಸುವ ಉದ್ದೇಶದಿಂದ ಶಂಸೀರ್ ಹೇಳಿಕೆಗಳನ್ನು ನೀಡಿದ್ದಾರೆ ಎಂದು ವಿಎಚ್‌ಪಿ ಕೇರಳ ಘಟಕ ಈಗಾಗಲೇ ಹಲವು ದೂರುಗಳನ್ನು ದಾಖಲಿಸಿದೆ. ಹಿಂದೂ ಧರ್ಮಕ್ಕೆ ಅವಮಾನ ಮಾಡಿ ಧಾರ್ಮಿಕ ವೈಷಮ್ಯ ಉಂಟು ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ವಿಹೆಚ್ಪಿ ಈ ಕ್ರಮ ಕೈಗೊಂಡಿದೆ. ಪಾಲಕ್ಕಾಡ್ ಉತ್ತರ ಸೇರಿದಂತೆ ಹಲವು ಠಾಣೆಗಳಲ್ಲಿ ಈಗಾಗಲೇ ದೂರು ದಾಖಲಾಗಿದೆ. ಜುಲೈ 30ರೊಳಗೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲು ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದ್ದು, ಇದೇ 30ರಂದು ಎರ್ನಾಕುಲಂನಲ್ಲಿ ನಡೆಯಲಿರುವ ವಿಎಚ್‌ಪಿ ರಾಜ್ಯ ಆಡಳಿತ ಮಂಡಳಿ ಸಭೆಯಲ್ಲಿ ಮುಂದಿನ ಪ್ರತಿಭಟನಾ ಕಾರ್ಯಕ್ರಮಗಳ ಬಗ್ಗೆ ಯೋಜನೆ ರೂಪಿಸಲಾಗುವುದು.
ಪಾಲಕ್ಕಾಡ್‌ನಲ್ಲಿ ನಡೆದ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್‌ನ ರಾಜ್ಯಾಧ್ಯಕ್ಷರಾಗಿ ಚಲನಚಿತ್ರ ನಿರ್ದೇಶಕ ವಿಜಿ ಥಂಪಿ ಅವರನ್ನು ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಎ.ಎನ್.ಶಂಸೀರ್ ವಿರುದ್ಧ ದೂರು ನೀಡಲು ಸಂಘಟನೆ ಒಮ್ಮತದಿಂದ ನಿರ್ಣಯ ಕೈಗೊಂಡಿತ್ತು.
ಶಂಸೀರ್ ತಮ್ಮ ಭಾಷಣದಲ್ಲಿ ಹಿಂದೂ ದೇವರು ಗಣಪತಿ ಮತ್ತು ಪುಷ್ಪಕ ವಿಮಾನ ಎಲ್ಲವೂ ಪುರಾಣ ಎಂದು ಹೇಳಿದ್ದರು. ಕೇಂದ್ರ ಸರ್ಕಾರವು ಈ ಪುರಾಣಗಳನ್ನು ಪ್ರಚಾರ ಮಾಡುತ್ತಿದೆ ಮತ್ತು ವೈಜ್ಞಾನಿಕ ಚಿಂತನೆ ಮತ್ತು ತಾಂತ್ರಿಕ ಪ್ರಗತಿ ಉತ್ತೇಜಿಸುವ ಬದಲು ಹಿಂದೂ ಪುರಾಣಗಳನ್ನು ಕಲಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು. ಕೃತಕ ಬುದ್ಧಿಮತ್ತೆಯ ಯುಗದಲ್ಲಾದರೂ ಇಂತಹ ಪೌರಾಣಿಕ ಪರಿಕಲ್ಪನೆಗಳನ್ನು ತಿರಸ್ಕರಿಸಬೇಕು ಎಂದು ಅವರು ಹೇಳಿದ್ದರು.
ಶಂಸೀರ್ ಅವರು ಎರ್ನಾಕುಲಂ ಜಿಲ್ಲೆಯ ಕುನ್ನತುನಾಡ್ ಕ್ಷೇತ್ರದಲ್ಲಿ 'ವಿದ್ಯಾ ಜ್ಯೋತಿ ಯೋಜನೆ' ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಲ್ಲಿ ಭಾಷಣದ ವೇಳೆ ಕೇರಳ ವಿಧಾನಸಭಾ ಸ್ಪೀಕರ್ ಶಂಸೀರ್ ಅವರು, 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ 'ಸಾವಿರಾರು ವರ್ಷಗಳ ಹಿಂದೆ ಪ್ರಾಚೀನ ಭಾರತದಲ್ಲಿ ಜೆನೆಟಿಕ್ ಸೈನ್ಸ್ ಮತ್ತು ಕಾಸ್ಮೆಟಿಕ್ ಸರ್ಜರಿ ಅಸ್ತಿತ್ವದಲ್ಲಿತ್ತು' ಎಂಬುದಾಗಿ ಉಲ್ಲೇಖಿಸಿದ್ದರು ಎಂದು ಹೇಳಲಾಗುತ್ತದೆ.
ಶಂಸೀರ್ ಅವರ ಹೇಳಿಕೆ ಬೆನ್ನಲ್ಲೇ ಬಿಜೆಪಿ ಮತ್ತು ವಿಎಚ್‌ಪಿ ಎರಡೂ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಶಂಸೀರ್ ಅವರನ್ನು ವಿಧಾನಸಭಾ ಸ್ಪೀಕರ್ ಸ್ಥಾನದಿಂದ ವಜಾಗೊಳಿಸುವಂತೆ ಮನವಿ ಮಾಡಿತ್ತು. ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಮತ್ತು ಬಿಜೆಪಿ ಐಟಿ ಸೆಲ್ ಸಂಚಾಲಕ ಅಮಿತ್ ಮಾಳವ್ಯ ಶಂಸೀರ್ ಅವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ್ದು, ಹಿಂದೂಗಳ ಆರಾಧ್ಯ ದೈವ ಗಣಪತಿ ಕುರಿತು ಹೇಳಿಕೆ ನೀಡಿರುವ ಕೇರಳ ಸ್ಪೀಕರ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ವಿವಾದದ ಬಗ್ಗೆ ಶಂಸೀರ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಎಚ್‌ಪಿ ಮತ್ತು ಬಿಜೆಪಿಯಿಂದ ನಡೆಯುತ್ತಿರುವ ಪ್ರತಿಭಟನೆ ಮತ್ತು ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಕೇರಳ ಗೃಹ ಇಲಾಖೆ ಸ್ಪೀಕರ್ ಎ.ಎನ್ ಶಂಸೀರ್ ಅವರ ಭದ್ರತೆ ಹೆಚ್ಚಿಸಲು ನಿರ್ಧರಿಸಿದೆ.
ಇದನ್ನೂ ಓದಿ: Opposition Dharna: ಮಣಿಪುರ ಕುರಿತು ಪ್ರಧಾನಿ ಮೋದಿ ಹೇಳಿಕೆಗೆ ಆಗ್ರಹ; ಸಂಸತ್ ಹೊರಗೆ 'ಇಂಡಿಯಾ' ನಾಯಕರ ಧರಣಿ