ನವದೆಹಲಿ: ಭಾರತವು ಆತ್ಮನಿರ್ಭರವಾಗಲು ಈ ಬಜೆಟ್ ವೇದಿಕೆ ಕಲ್ಪಿಸಿದೆ. ದೇಶದ ಪುನಶ್ಚೇತನಕ್ಕಾಗಿ ಬಜೆಟ್ ಮಂಡಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2021-22ನೇ ಸಾಲಿನ ಬಜೆಟ್ ಆಯವ್ಯಯದ ಬಗ್ಗೆ ಇಂದಿನ ಲೋಕಸಭಾ ಕಲಾಪದಲ್ಲಿ ಮಾತನಾಡುತ್ತಿರುವ ಅವರು, ಈ ಬಾರಿಯ ಬಜೆಟ್ ಹಾಗೂ ಕೇಂದ್ರ ಸರ್ಕಾರವು ಬಂಡವಾಳಶಾಹಿಗಳ ಪರವಾಗಿದೆ ಎಂದು ಆರೋಪಿಸಿರುವ ಪ್ರತಿಪಕ್ಷಗಳ ನಾಯಕರಿಗೆ ಉತ್ತರ ನೀಡಿದ್ದಾರೆ.
ನಮ್ಮ ಬಂಡವಾಳಶಾಹಿಗಳು ಯಾರು? ಜನಸಾಮಾನ್ಯರೇ ಇಲ್ಲಿ ಬಂಡವಾಳಶಾಹಿಗಳು. ಅವರು ಬಹುಶಃ ಜನರಿಂದ ತಿರಸ್ಕರಿಸಲ್ಪಟ್ಟಿರುವ ಹಾಗೂ ಓಪನ್ ಟೆಂಡರ್, ಜಾಗತಿಕ ಟೆಂಡರ್ಗಳಿಗೆ ಆಹ್ವಾನ ನೀಡದ ಪಕ್ಷದ ನೆರಳಿನಲ್ಲಿ ಅಡಗಿದ್ದಾರೆ. ಪಿಎಂ ಸ್ವಾನಿಧಿ ಯೋಜನೆಯ ಲಾಭ ಬಂಡವಾಳಶಾಹಿಗಳಿಗೆ ತಲುಪುವುದಿಲ್ಲ. ಸಾಮಾನ್ಯ ಜನರಿಗೆ ತಲುಪುತ್ತದೆ ಎಂದು ಕಾಂಗ್ರೆಸ್ಗೆ ಸೀತಾರಾಮನ್ ಟಾಂಗ್ ನೀಡಿದರು.
ಇದನ್ನೂ ಓದಿ: ಕೊರೊನಾ ನಡುವೆಯೂ ಸರ್ಕಾರ ಆರ್ಥಿಕ ಸುಧಾರಣೆಗೆ ಕ್ರಮ ಕೈಗೊಂಡಿದೆ: ನಿರ್ಮಲಾ ಸೀತಾರಾಮನ್
ಆರೋಗ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ನಾನು ಬಜೆಟ್ ಭಾಷಣದಲ್ಲಿ ಹೇಳಿದ್ದೆ. ಇದು ಅನಾರೋಗ್ಯ ತಡೆಗಟ್ಟುವುದನ್ನು ಸೂಚಿಸುತ್ತದೆ. ಯೋಗಕ್ಷೇಮವನ್ನೂ ಸಹ ಸೂಚಿಸುತ್ತದೆ ಎಂದು ಇದೇ ವೇಳೆ ಸಚಿವರು ಹೇಳಿದರು.
ರಕ್ಷಣಾ, ಆರೋಗ್ಯ ಸೇರಿದಂತೆ ವಿವಿಧ ವಲಯಗಳಿಗೆ ಈ ಬಾರಿಯ ಬಜೆಟ್ನಲ್ಲಿ ನೀಡಿರುವ ಅನುದಾನದ ಕುರಿತ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ನಿರ್ಮಲಾ ಸೀತಾರಾಮನ್ ಉತ್ತರಿಸಿದ್ದಾರೆ.