ಬೆಂಗಳೂರು : ತಾನು ಪಾಲುದಾರನಾಗಿದ್ದ ಕಂಪನಿಯಲ್ಲಿನ ಉದ್ಯೋಗಿಗಳಿಗೆ ಇಪಿಎಫ್ ಹಣ ಪಾವತಿ ಮಾಡದೆ ವಂಚಿಸಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧದ ವಾರೆಂಟ್‌ಗೆ ಹೈಕೋರ್ಟ್ ತಡೆ ನೀಡಿ ಆದೇಶ ಹೊರಡಿಸಿದೆ.
ಆರೋಪ ಸಂಬಂಧ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಹೊರಡಿಸಿರುವ ರಿಕವರಿ ನೋಟಿಸ್ ಮತ್ತು ಬಂಧನ ವಾರೆಂಟ್ ಪ್ರಶ್ನಿಸಿ ರಾಬಿನ್ ಉತ್ತಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜು ಅವರಿದ್ದ ರಜಾಕಾಲದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರ ರಾಬಿನ್ ಉತ್ತಪ್ಪ ಅವರು ಸೆಂಚುರೀಸ್ ಲೈಫ್-ಸ್ಟೈಲ್ ಬ್ರ್ಯಾಂಡ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯ ಸಹ ಪಾಲುದಾರರಾಗಿದ್ದರು. ಆದರೆ, 2020ರಲ್ಲಿಯೇ ತಮ್ಮ ಪಾಲುದಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದ್ದರಿಂದ ಅವರನ್ನು ಪ್ರಕರಣದಲ್ಲಿ ಭಾಗಿಯನ್ನಾಗಿಸುವುದಕ್ಕೆ ಅವಕಾಶವಿಲ್ಲ. ಹೀಗಾಗಿ ಅವರಿಗೆ ನೀಡಿರುವ ರಿಕವರಿ ನೋಟಿಸ್ ಮತ್ತು ಪುಲಕೇಶಿ ನಗರ ಪೊಲೀಸರು ಹೊರಡಿಸಿರುವ ಬಂಧನ ವಾರೆಂಟ್ ರದ್ದುಪಡಿಸಬೇಕು ಎಂದು ಕೋರಿದರು. ವಾದ ಆಲಿಸಿದ ಪೀಠ, ಎಫ್‌ಐಆರ್ ಮತ್ತು ರಿಕವರಿ ನೋಟಿಸ್‌ಗೆ ತಡೆ ನೀಡಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ : ರಾಬಿನ್ ಉತ್ತಪ್ಪ ಮೆಸಸ್ ಸೆಂಚುರೀಸ್ ಲೈಫ್-ಸ್ಟೈಲ್ ಬ್ರ್ಯಾಂಡ್ ಪ್ರೈವೇಟ್ ಲಿಮಿಟೆಡ್ ಕಂಪೆನಿಗೆ ಪಾಲುದಾರರಾಗಿದ್ದರು. ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಲವರ ಇಪಿಎಫ್ ಹಣ ಪಾವತಿಸಿಲ್ಲ. ಸಂಬಳದಲ್ಲಿ ಇಪಿಎಫ್ ಹಣ ಕಡಿತಗೊಳಿಸಿಕೊಂಡು, ಉದ್ಯೋಗಿಗಳ ಖಾತೆಗೆ ಹಾಕದೇ 23 ಲಕ್ಷ ರೂ.ಗಳನ್ನು ವಂಚಿಸಿರುವ ಆರೋಪ ಕೇಳಿ ಬಂದಿತ್ತು.
ದೂರಿನ ಸಂಬಂಧ ಇಪಿಎಫ್ ರಿಜಿನಲ್ ಕಮಿಷನರ್ ಷಡಾಕ್ಷರಿ ಗೋಪಾಲ ರೆಡ್ಡಿ ಅವರು ಪತ್ರ ಬರೆದು ರಾಬಿನ್ ಉತ್ತಪ್ಪ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಕೋರಿದ್ದರು. ಇದನ್ನು ಪ್ರಶ್ನಿಸಿ ಉತ್ತಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದಕ್ಕೂ ಮೊದಲು ಈ ಕುರಿತಂತೆ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದ ಅವರು, ಆರೋಪ ಎದುರಿಸುತ್ತಿರುವ ಕಂಪನಿಯಲ್ಲಿ ತಮ್ಮ ಸ್ಥಾನಕ್ಕೆ ಸಾಕಷ್ಟು ವರ್ಷಗಳ ಹಿಂದೆಯೇ ರಾಜೀನಾಮೆ ನೀಡಿರುವುದಾಗಿ ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ : ಇಪಿಎಫ್ ಹಣ ವಂಚನೆ ಆರೋಪ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ : ರಾಬಿನ್ ಉತ್ತಪ್ಪ ಸ್ಪಷ್ಟನೆ - ROBIN UTHAPPA