ಬ್ರಸೆಲ್ಸ್ (ಬೆಲ್ಜಿಯಂ): ರಷ್ಯಾ ಜೊತೆಗಿನ ಭಾರತದ ಸಂಬಂಧವನ್ನು ಪ್ರತಿಪಕ್ಷಗಳ ಒಕ್ಕೂಟ ಅರ್ಥಮಾಡಿಕೊಂಡಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ದೇಶದ ನಿಲುವನ್ನು ಪ್ರತಿಪಕ್ಷಗಳು ಸಂಪೂರ್ಣವಾಗಿ ಒಪ್ಪುತ್ತವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
ಯುರೋಪ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಬೆಲ್ಜಿಯಂನ ಬ್ರಸೆಲ್ಸ್ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧಗಳನ್ನು ಹೇರಿರುವ ಸಂದರ್ಭದಲ್ಲೇ ಭಾರತಕ್ಕೆ ಕಚ್ಚಾ ತೈಲ ಮಾರಾಟಕ್ಕೆ ಹೆಚ್ಚುತ್ತಿರುವ ಬಗ್ಗೆ ಮಾಧ್ಯಮಗಳ ಪ್ರತಿನಿಧಿಗಳ ಪ್ರಶ್ನೆ ಉತ್ತರಿಸಿದರು.
ಇದನ್ನೂ ಓದಿ: G20 Summit: ಬ್ರಿಟನ್ ಪ್ರಧಾನಿಯಾಗಿ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ ರಿಷಿ ಸುನಕ್
''ಈ ಸಂಘರ್ಷದ ಬಗ್ಗೆ (ರಷ್ಯಾ ಮತ್ತು ಉಕ್ರೇನ್ ನಡುವೆ) ಭಾರತದ ಪ್ರಸ್ತುತ ನಿಲುವನ್ನು ಪ್ರತಿಪಕ್ಷಗಳು ಸಂಪೂರ್ಣವಾಗಿ ಒಪ್ಪುತ್ತವೆ ಎಂದು ನಾನು ಭಾವಿಸುತ್ತೇನೆ. ನಾವು ರಷ್ಯಾದೊಂದಿಗೆ ಸಂಬಂಧವನ್ನು ಹೊಂದಿದ್ದೇವೆ. ಪ್ರತಿಪಕ್ಷಗಳು ಪ್ರಸ್ತುತ ಸರ್ಕಾರ ಪ್ರಸ್ತಾಪಿಸುತ್ತಿರುವುದಕ್ಕಿಂತ ಭಿನ್ನವಾದ ನಿಲುವನ್ನು ಹೊಂದಿರುವುದಿಲ್ಲ ಎಂದೂ ನಾನು ಭಾವಿಸಿರುವೆ'' ಎಂದು ರಾಹುಲ್ ಗಾಂಧಿ ತಿಳಿಸಿದರು.
ಭಾರತವು ರಷ್ಯಾದ ಕಚ್ಚಾ ತೈಲವನ್ನು ರಿಯಾಯಿತಿಯಲ್ಲಿ ಖರೀದಿಸುತ್ತಿದೆ. ಭಾರತವು ಹಲವಾರು ಸಂದರ್ಭಗಳಲ್ಲಿ ತನ್ನ ತೈಲ ಆಮದುಗಳನ್ನು ರಾಷ್ಟ್ರೀಯ ಹಿತಾಸಕ್ತಿ ಹಾಗೂ ದೊಡ್ಡ ಗ್ರಾಹಕರ ನೆಲೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸುತ್ತದೆ. ಅಲ್ಲದೇ, ಸಂಘರ್ಷದ ಶೀಘ್ರ ಪರಿಹಾರಕ್ಕಾಗಿ ರಷ್ಯಾ ಮಾತುಕತೆ ಮತ್ತು ರಾಜತಾಂತ್ರಿಕತೆಯ ಹಾದಿಯನ್ನು ಅನುಸರಿಸುವ ಅಗತ್ಯವಿದೆ ಎಂಬುದು ಭಾರತದ ನಿಲುವು.
ಖರ್ಗೆಗೆ ಆಹ್ವಾನ ನೀಡದ ಬಗ್ಗೆ ರಾಹುಲ್ ಪ್ರತಿಕ್ರಿಯೆ: ಇದೇ ವೇಳೆ, ದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ನಡೆಯುತ್ತಿರುವ ಜಿ-20 ಶೃಂಗಸಭೆಗೆ ರಾಜಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸದಿರುವ ಕುರಿತ ಪ್ರಶ್ನೆಗೆ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.
"ಇದರಲ್ಲಿ ವಿರೋಧಾಭಾಸ ಏನಿದೆ?, ಅವರು (ಕೇಂದ್ರ ಸರ್ಕಾರದವರು) ಪ್ರತಿಪಕ್ಷದ ನಾಯಕರನ್ನು ಆಹ್ವಾನಿಸದಿರಲು ನಿರ್ಧರಿಸಿದ್ದಾರೆ. ಇದೇ ನಿಮಗೆ (ಮಾಧ್ಯಮಗಳ ಪ್ರತಿನಿಧಿಗಳಿಗೆ) ಭಾರತದ ಜನಸಂಖ್ಯೆಯ ಶೇ.60ರಷ್ಟು ನಾಯಕರನ್ನು (ಕೇಂದ್ರ ಸರ್ಕಾರದವರು) ಗೌರವಿಸುವುದಿಲ್ಲ ಎಂದು ನಿಮಗೆ ಹೇಳುತ್ತದೆ. ಇದು ಜನರು ಯೋಚಿಸಬೇಕಾದ ವಿಷಯ. ಅವರು ಅದನ್ನು ಏಕೆ ಮಾಡಬೇಕೆಂದು ಭಾವಿಸುತ್ತಿದ್ದಾರೆ. ಇದರ ಹಿಂದೆ ಯಾವ ರೀತಿಯ ಆಲೋಚನೆ ಇದೆ'' ಎಂದು ರಾಹುಲ್ ಟೀಕಿಸಿದರು.
ಬೆಲ್ಜಿಯಂ ನಂತರ ರಾಹುಲ್ ಗಾಂಧಿ ಪ್ಯಾರಿಸ್‌ಗೆ ತೆರಳಿ ಫ್ರೆಂಚ್ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಲಿದ್ದಾರೆ. ಅಲ್ಲದೇ, ಅವರು ನಾರ್ವೆಗೂ ಭೇಟಿ ನೀಡಲಿದ್ದು, ಅಲ್ಲಿ ಓಸ್ಲೋದಲ್ಲಿ ಆ ದೇಶದ ಸಂಸದರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ನಂತರ ಭಾರತಕ್ಕೆ ಆಗಮಿಸಲಿದ್ದಾರೆ.
ಇದನ್ನೂ ಓದಿ: ಜಿ20 ಅತಿಥಿಗಳಿಗೆ ರಾಷ್ಟ್ರಪತಿ ಔತಣಕೂಟ; ಆಹ್ವಾನ ಬಂದಿಲ್ಲ ಎಂದ ಖರ್ಗೆ, ಅನಾರೋಗ್ಯದಿಂದಾಗಿ ಗೌಡರು ದೂರ