ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಉಂಟಾಗುವ ಭಯ, ಆತಂಕ ಮತ್ತು ಒತ್ತಡವು ಮಾನಸಿಕ ಆರೋಗ್ಯಕ್ಕೆ ಧಕ್ಕೆಯನ್ನುಂಟು ಮಾಡುವ ಸಾಧ್ಯತೆ ಇದೆ. ಹಾಗಾಗಿ ಹೊಸ ಅಧ್ಯಯನವೊಂದು ಈ ರೋಗಲಕ್ಷಣಗಳನ್ನು ಸುರಕ್ಷಿತ ಮತ್ತು ಸರಾಗವಾಗಿ ಆನ್ಲೈನ್ನ ಕೆಲವು ಅಭ್ಯಾಸಗಳ ಮೂಲಕ ಸರಾಗಗೊಳಿಸಬಹುದು ಎಂದು ಹೇಳಿದೆ.
ಗ್ಲೋಬಲ್ ಅಡ್ವಾನ್ಸಸ್ ಇನ್ ಹೆಲ್ತ್ ಅಂಡ್ ಮೆಡಿಸಿನ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನ ವರದಿಯು, ಆನ್‌ಲೈನ್ ಅಭ್ಯಾಸಗಳಲ್ಲಿ ಭಾಗಿಯಾಗುವ ಶೇ. 76ರಷ್ಟು ವ್ಯಕ್ತಿಗಳಲ್ಲಿ ಆತಂಕ ಕಡಿಮೆಯಾಗಿದೆ ಎಂದಿದೆ. ಶೇ. 80ರಷ್ಟು ಜನರಲ್ಲಿ ಒತ್ತಡ ಕಡಿಮೆಯಾಗಿದೆ ಮತ್ತು ಶೇ. 55 ರಷ್ಟು ಜನರಲ್ಲಿ ಕೋವಿಡ್ -19 ಮೇಲಿನ ಆತಂಕ ಕಡಿಮೆಯಾಗಿದೆ ಎಂಬ ಅಂಶ ವರದಿಯಿಂದ ತಿಳಿದುಬಂದಿದೆ.
"ಅನಿಶ್ಚಿತತೆಯ ಸಮಯದಲ್ಲಿ ಆನ್‌ಲೈನ್ ಮೈಂಡ್ಫುಲ್ನೆಸ್ ಅಭ್ಯಾಸಗಳು ಮಾನಸಿಕ ಆರೋಗ್ಯವನ್ನು ಸುಧಾರಿಸಬಹುದು ಎಂದು ನಾವು ಕಂಡುಕೊಂಡಿದ್ದೇವೆ. ಸಮೀಕ್ಷೆಯ ವೇಳೆಯಲ್ಲಿಯೂ ನಾವು ಈ ಬಗ್ಗೆ ಪ್ರತಿಕ್ರಿಯೆಯನ್ನು ಪಡೆದಿದ್ದೇವೆ. ಇದು ಸಂಪರ್ಕದ ಪ್ರಜ್ಞೆ ಮತ್ತು ಇತರರಿಗೆ ಸಹಾಯ ಮಾಡುವ ಮನಸ್ಥಿತಿಯನ್ನು ತೋರಿಸಿದೆ" ಎಂದು ಸಹಾಯಕ ಪ್ರಾಧ್ಯಾಪಕ ಸಂಶೋಧಕ ರೆಬೆಕಾ ಎರ್ವಿನ್ ವೆಲ್ಸ್ ಹೇಳಿದ್ದಾರೆ.
"ಸಾಂಕ್ರಾಮಿಕ ಸಮಯದಲ್ಲಿ ಇತರರಿಗೆ ಸಹಾಯ ಮಾಡುವುದು ಅಸಾಧ್ಯವಾಗಿದೆ. ಇಂತಹ ಸನ್ನಿವೇಶದಲ್ಲಿಯೂ ನಾವು ಆನ್‌ಲೈನ್ ಮೂಲಕ ಸಹಾಯವನ್ನು ಮಾಡುತ್ತಿದ್ದೇವೆ" ಎಂದು ವೆಲ್ಸ್ ಹೇಳುತ್ತಾರೆ.
ಇದನ್ನೂ ಓದಿ: ಕೊರೊನಾ ಗೆದ್ದವರಿಗೆ ಅಲ್ಪಾವಧಿ ಮೆಮೊರಿ ಲಾಸ್, ಲೋ ಥಿಂಕಿಂಗ್: ಹೊಸ ಅಧ್ಯಯನದಲ್ಲಿ ಅಚ್ಚರಿಯ ಸಂಗತಿ ಬಹಿರಂಗ
ಭಾವನಾತ್ಮಕ ಆರೋಗ್ಯದ ಮೇಲೆ ಈ ಸಾಂಕ್ರಾಮಿಕ ರೋಗವು ಪ್ರಭಾವವನ್ನು ಬೀರುತ್ತದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಸುರಕ್ಷಿತ, ಆನ್‌ಲೈನ್ ಧ್ಯಾನದ ತಂತ್ರವು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಮೌಲ್ಯಮಾಪನ ಮಾಡಲು ಬಯಸಿದ್ದೇವೆ ಎಂದು ಸಂಶೋಧಕರು ಹೇಳಿದ್ದಾರೆ.
ಅಧ್ಯಯನಕ್ಕಾಗಿ ಸಂಶೋಧನಾ ತಂಡವು ವಿಶ್ವದಾದ್ಯಂತ 233 ಜನರನ್ನು ಒಳಪಡಿಸಿತ್ತು. ಭಾಗವಹಿಸುವವರಲ್ಲಿ ಹೆಚ್ಚಿನವರು (ಶೇಕಡಾ 63) ಈ ಮೊದಲು ಮೈಂಡ್ಫುಲ್ನೆಸ್ ಅಭ್ಯಾಸಗಳನ್ನು ಮಾಡಿಲ್ಲ. ಶೇಕಡಾ 89 ರಷ್ಟು ಭಾಗವಹಿಸುವವರಿಗೆ ಇದು ಸಹಾಯಕವಾಗಿದೆಯೆಂದು ಹೇಳಿದರು. ಆನ್‌ಲೈನ್ ಪ್ಲಾಟ್‌ಫಾರ್ಮ್ ಸಾವಧಾನತೆಯನ್ನು ಅಭ್ಯಾಸ ಮಾಡಲು ಪರಿಣಾಮಕಾರಿಯಾಗಿದೆ.
ಗಮನಿಸಬೇಕಾದ ಅಂಶವೆಂದರೆ, ಭಾಗವಹಿಸುವವರಲ್ಲಿ ಶೇ 21 ರಷ್ಟು ಜನರು ನಿವೃತ್ತರಾದವರು, ವಯಸ್ಸಾದವರು ಎಂದು ತಿಳಿದುಬಂದಿದೆ. ಸಾಂಕ್ರಾಮಿಕ ಸಮಯದಲ್ಲಿ ಇತರರಿಗೆ ಅವರು ಹೇಗೆ ಸಹಾಯ ಮಾಡುತ್ತಿದ್ದಾರೆ ಎಂಬ ಬಗ್ಗೆ ಸಹ ಭಾಗವಹಿಸುವವರನ್ನು ಸಮೀಕ್ಷೆ ಮಾಡಲಾಯಿತು.