ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಎನ್‌ಕೌಂಟರ್ ನಡೆದಿದೆ. ಜಮ್ಮು ಪ್ರಾಂತ್ಯದಲ್ಲಿ ಸೋಮವಾರ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಘರ್ಷಣೆ ನಡೆದಿದ್ದು, ಒಬ್ಬ ಉಗ್ರನನ್ನು ಹೊಡೆದುರುಳಿಸಲಾಗಿದೆ. ಇದೇ ವೇಳೆ, ಒಬ್ಬ ಪೊಲೀಸ್ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಜಮ್ಮುವಿನ ರಿಯಾಸಿಯ ಚಸಾನಾ ಪ್ರದೇಶದಲ್ಲಿ ಉಗ್ರಗಾಮಿಗಳು ಅಡಗಿದ್ದಾರೆ ಎಂಬ ಮಾಹಿತಿ ಪಡೆದ ಭದ್ರತಾ ಪಡೆಗಳು, ಸ್ಥಳೀಯ ಪೊಲೀಸರ ಜೊತೆಗೂಡಿ ಜಂಟಿ ಕಾರ್ಯಾಚರಣೆ ನಡೆಸಿವೆ. ರಿಯಾಸಿ ಪ್ರದೇಶವನ್ನು ಸುತ್ತುವರೆದ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿದಾಗ, ಉಗ್ರರು ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳೂ ಗುಂಡು ಹಾರಿಸಿವೆ. ಚಕಮಕಿಯ ವೇಳೆ ಒಬ್ಬ ಹತನಾಗಿದ್ದಾನೆ.
ಈ ಬಗ್ಗೆ ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಮಾಹಿತಿ ನೀಡಿರುವ ಜಮ್ಮು ಎಡಿಜಿಪಿ ಮುಖೇಶ್ ಸಿಂಗ್ ಅವರು, ರಿಯಾಸಿ ಪ್ರದೇಶದಲ್ಲಿ ಇಬ್ಬರು ಉಗ್ರರು ಅಡಗಿದ್ದ ಬಗ್ಗೆ ಮಾಹಿತಿ ಬಂದಿತ್ತು. ತಕ್ಷಣವೇ ನಮ್ಮ ಪಡೆಗಳು ಸ್ಥಳಕ್ಕಾಗಮಿಸಿ ಶೋಧ ಕಾರ್ಯಾಚರಣೆ ನಡೆಸುವಾಗ ಗುಂಡಿನ ಚಕಮಕಿ ನಡೆಯಿತು. ಘರ್ಷಣೆಯಲ್ಲಿ ಓರ್ವ ಭಯೋತ್ಪಾದಕ ಹತನಾಗಿದ್ದು, ಪೊಲೀಸ್ ಸಿಬ್ಬಂದಿಗೆ ಗುಂಡೇಟು ಬಿದ್ದಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬನಿಗಾಗಿ ಶೋಧ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಬಾರಾಮುಲ್ಲಾದಲ್ಲಿ ಎನ್‌ಕೌಂಟರ್ : ಬಾರಾಮುಲ್ಲಾ ಜಿಲ್ಲೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೇನಾಪಡೆಗಳು ಈಚೆಗೆ ಹೊಡೆದುರುಳಿಸಿದ್ದವು. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ವನಿಗಮ್ ಪಯೀನ್ ಕ್ರೀರಿ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ನಿರ್ದಿಷ್ಟ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಗಿಳಿದವು. ಈ ವೇಳೆ, ಸೇನಾ ಪಡೆಗಳ ಮೇಲೆಯೇ ಉಗ್ರರು ಗುಂಡಿನ ದಾಳಿ ನಡೆಸಿದರು. ಪ್ರತಿದಾಳಿ ನಡೆಸಿದ ಸೇನೆ ಇಬ್ಬರು ಆಗಂತುಕರನ್ನು ಎನ್‌ಕೌಂಟರ್ ಮಾಡಿದೆ. ಸ್ಥಳದಲ್ಲಿ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿತ್ತು.
ಎನ್‌ಕೌಂಟರ್ ನಡೆದ ಸ್ಥಳದಿಂದ ಎಕೆ 47 ರೈಫಲ್ ಮತ್ತು ಪಿಸ್ತೂಲ್ ಸೇರಿದಂತೆ ಸ್ಫೋಟಕ ಸಾಮಗ್ರಿ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು. ಕಣಿವೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ನಡೆದ ಎರಡನೇ ಎನ್‌ಕೌಂಟರ್ ಇದಾಗಿತ್ತು. ಇದಕ್ಕೂ ಹಿಂದಿನ ದಿನ ಕುಪ್ವಾರ ಜಿಲ್ಲೆಯ ಮಚಿಲ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಬಳಿ ಭದ್ರತಾ ಪಡೆಗಳ ಕಣ್ತಪ್ಪಿಸಿ ಒಳನುಸುಳುವಿಕೆಗೆ ಪ್ರಯತ್ನಿಸುತ್ತಿದ್ದ ಇಬ್ಬರನ್ನು ಎನ್‌ಕೌಂಟರ್ ಮಾಡಲಾಗಿತ್ತು. ಕಾಶ್ಮೀರ ಕಣಿವೆಯಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಿದ ಹಿನ್ನೆಲೆಯಲ್ಲಿ ಉಗ್ರರ ಒಳನುಸುಳುವಿಕೆ ಕಡಿಮೆಯಾಗಿದೆ.
ಇದನ್ನೂ ಓದಿ: ಅಸ್ಸೋಂನಲ್ಲಿ ಒಂದೇ ದಿನ ಎರಡು ಎನ್‌ಕೌಂಟರ್: ಕಾಡುಪ್ರಾಣಿ ಬೇಟೆಗಾರ ಖತಂ, ಡ್ರಗ್ಸ್ ಪೆಡ್ಲರ್ಗೆ ಗುಂಡೇಟು