ಸಿಂಧುದುರ್ಗ(ಮಹಾರಾಷ್ಟ್ರ): ಗೂಳಿ ಕಾಳಗದಲ್ಲಿ ಗಾಯಗೊಂಡು ಗೂಳಿಯೊಂದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವಾನ್ ತಾಲೂಕಿನಲ್ಲಿ ನಡೆದಿದೆ. ಹೋರಿ ಸಾವು ಸಂಬಂಧ ಮುಂಬೈನ ಮಾಜಿ ಮೇಯರ್, ಶಿವಸೇನೆ ಮುಖಂಡ ದತ್ತ ದಳವಿ ಸೇರಿದಂತೆ 12 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿವಸೇನೆ ಸಂಸದ ವಿನಾಯಕ್ ರಾವುತ್ ಹುಟ್ಟೂರಾದ ತಲ್ಗಾಂವ್‌ನಲ್ಲಿ ಈ ಗೂಳಿ ಕಾಳಗ ಆಯೋಜಿಸಲಾಗಿತ್ತು. ಎರಡು ಗೂಳಿಗಳ ನಡುವೆ ಕಾಳಗದಲ್ಲಿ ವೆಂಗುರ್ಲೆ ತಾಲೂಕಿನ ಅಸೋಲಿ ಗ್ರಾಮದ ವಿಕ್ಕಿ ಕೆರ್ಕರ್ ಎಂಬುವವರಿಗೆ ಸೇರಿದ ಗೂಳಿ ಗಾಯಗೊಂಡಿತ್ತು. ತೀವ್ರ ರಕ್ತ ಸ್ರಾವವಾಗಿ ಅದು ಮೃತಪಟ್ಟಿದೆ. ಇದರ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಇದರಿಂದ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಗೂಳಿ ಕಾಳಗ ಆಯೋಜಿಸಿದ್ದ ಮತ್ತು ಭಾಗಿಯಾದವರು ಸೇರಿ 12 ಜನರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದೇವೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ನಿತಿನ್ ಬಾಗ್ಟೆ ತಿಳಿಸಿದ್ದಾರೆ.
ಇದನ್ನೂ ಓದಿ: ಕೇಂದ್ರದ ವಿರುದ್ಧ ತಿರುಗಿಬಿದ್ದ ಪಂಜಾಬ್ ಸಿಎಂ: ವಿಧಾನಸಭೆಯಲ್ಲಿ ಮಹತ್ವದ ನಿರ್ಣಯ ಮಂಡನೆ