ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಿಎಂ-ಕಿಸಾನ್ ಯೋಜನೆಯ ಎರಡನೇ ವಾರ್ಷಿಕೋತ್ಸವ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರೈತರ ಆದಾಯವನ್ನು ದ್ವಿಗುಣಗೊಳಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ತಮ್ಮ ನಿಲುವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡರು.
ಬೆಳೆಗಳ ರಕ್ಷಣೆಗಾಗಿ ಹಾಗೂ ರೈತರ ಹಿತ ಕಾಪಾಡಲು ಕನಿಷ್ಟ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಐತಿಹಾಸಿಕ ಹೆಚ್ಚಳ ಮಾಡಲಾಗಿದೆ ಎಂದು ಸರಣಿ ಟ್ವೀಟ್‌ಗಳ ಮೂಲಕ ಕೃಷಿ ಕಾಯ್ದೆಗಳನ್ನ ಸಮರ್ಥಿಸಿಕೊಳ್ಳುವ ಕೆಲಸ ಮಾಡಿದ್ದಾರೆ.
ಕಳೆದ ಏಳು ವರ್ಷಗಳಲ್ಲಿ, ಭಾರತ ಸರ್ಕಾರವು ಕೃಷಿಯನ್ನು ಪರಿವರ್ತಿಸಲು ಅನೇಕ ಉಪಕ್ರಮಗಳನ್ನು ತೆಗೆದುಕೊಂಡಿದೆ. ಉತ್ತಮ ನೀರಾವರಿಗೆ ಹೆಚ್ಚಿನ ತಂತ್ರಜ್ಞಾನ ಅಳವಡಿಕೆ, ಕೈಗೆಟುಕುವ ಬಡ್ಡಿದರದಲ್ಲಿ ಸಾಲ ಮತ್ತು ಮಾರುಕಟ್ಟೆಗಳಿಗೆ ಅನುದಾನ, ಬೆಳೆ ವಿಮೆ, ಮಣ್ಣಿನ ಆರೋಗ್ಯದ ಬಗ್ಗೆ ಸರ್ಕಾರ ಕ್ರಮಗಳನ್ನು ಕೈಗೊಂಡಿದ್ದು, ಮಧ್ಯವರ್ತಿಗಳನ್ನು ನಿರ್ಮೂಲನೆ ಮಾಡುವವರೆಗೆ ಎಲ್ಲ ಕ್ರಮಗಳನ್ನ ಸರ್ಕಾರ ತೆಗೆದುಕೊಂಡಿದೆ ಎಂದು ಪ್ರಧಾನಿ ರೈತರಿಗೆ ಸರ್ಕಾರ ನೀಡಿರುವ ಸವಲತ್ತುಗಳನ್ನು ತಿಳಿಸುವ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್ ಕುಮಾರ್ ಸೇರಿ 14 ಜನರ ವಿರುದ್ಧ ಕೇಸ್ ದಾಖಲು
ಇದೇ ದಿನ, 2 ವರ್ಷಗಳ ಹಿಂದೆ ಪಿಎಂ - ಕಿಸಾನ್ ಯೋಜನೆಯನ್ನು ರೈತರು ಘನತೆಯ ಜೀವನವನ್ನು ಮತ್ತು ನಮ್ಮ ಶ್ರಮಶೀಲತೆ ಯೊಂದಿಗೆ ಸಮೃದ್ಧಿಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಪ್ರಾರಂಭಿಸಲಾಯಿತು ಎಂದು ನೆನಪಿಸಿಕೊಂಡರು.