ನವದೆಹಲಿ: ಗಡಿಯುದ್ದಕ್ಕೂ ಮತ್ತು ಕಣಿವೆಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಬಗ್ಗೆ ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಶ್ರೀನಗರಕ್ಕೆ ಎರಡು ದಿನಗಳ ಕಾಲ ಭೇಟಿ ನೀಡಲಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಇತ್ತೀಚಿನ ಕದನ ವಿರಾಮ ಒಪ್ಪಂದವು ಫೆಬ್ರವರಿ ಕೊನೆಯ ವಾರದಲ್ಲಿ ಎರಡೂ ಸೇನೆಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವಿನ ಮಾತುಕತೆಯ ನಂತರ ಪ್ರಾರಂಭವಾಗಿತ್ತು.
"ಕಣಿವೆಯಲ್ಲಿ ಭಯೋತ್ಪಾದನೆ ನಿಗ್ರಹ ಮತ್ತು ಉಗ್ರರ ಒಳನುಸುಳುವಿಕೆ ತಡೆಯುವ ಕಾರ್ಯಾಚರಣೆಗಳನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥರು ಇಂದು ಶ್ರೀನಗರಕ್ಕೆ ಆಗಮಿಸುತ್ತಾರೆ" ಎಂದು ಸೇನೆಯ ಮೂಲಗಳು ತಿಳಿಸಿವೆ.
ಒಳನುಸುಳುವಿಕೆಗೆ ಭಯೋತ್ಪಾದಕರು ಮಾಡುವ ಯಾವುದೇ ಪ್ರಯತ್ನಗಳನ್ನು ನಿಭಾಯಿಸಲು ಸೈನ್ಯದ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸಲು ಮುಖ್ಯಸ್ಥರು ಕಣಿವೆಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಕದನ ವಿರಾಮ ಒಪ್ಪಂದದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪ್ರಮುಖ ಪಾತ್ರ ವಹಿಸಿದ್ದು, ಕಳೆದ ಹಲವು ವರ್ಷಗಳಲ್ಲಿ ಇಷ್ಟು ದೀರ್ಘಾವಧಿಯವರೆಗೆ ಎಲ್‌ಒಸಿಯ ಎರಡೂ ಬದಿಗಳಲ್ಲಿ ಶಾಂತಿ ನೆಲೆಸಿರಲಿಲ್ಲ.
ಒಪ್ಪಂದವನ್ನು ಸಂಪೂರ್ಣವಾಗಿ ಪಾಲಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸೇನಾ ಮುಖ್ಯಸ್ಥ ಜನರಲ್ ನರವಾಣೆ ತೆರಳಿದ್ದಾರೆ.
ಫೆಬ್ರವರಿ 25ರಂದು ಹೊರಡಿಸಿದ ಜಂಟಿ ಹೇಳಿಕೆಯ ಮೂಲಕ ಉಭಯ ಸೇನೆಗಳು ಕದನ ವಿರಾಮ ಘೋಷಣೆ ಮಾಡಿದ್ದವು. ಉಭಯ ದೇಶಗಳು ಈ ಹಿಂದೆ 2003ರಲ್ಲಿ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದರೆ ಪಾಕ್ ಮಾತ್ರ ಅದನ್ನು ಪದೇ ಪದೆ ಉಲ್ಲಂಘಿಸುತ್ತಿದೆ.