ಬಾಘ್ಪತ್ (ಉತ್ತರ ಪ್ರದೇಶ): ಓದಲು ವಯಸ್ಸಿನ ಹಂಗಿಲ್ಲ. ಮನಸ್ಸು ಮಾಡಿದರೆ ಯಾವುದೇ ವಯಸ್ಸಿನಲ್ಲಿಯೂ ಓದಿ ಸಾಧಿಸಬಹುದು. ಇದಕ್ಕೆ ಹೊಸ ಉದಾಹರಣೆಯಾಗಿದ್ದಾರೆ ಇಲ್ಲಿನ ಬಾಗ್ಪತ್ ಜಿಲ್ಲೆಯ ಕಹರ್ಕಾ ಗ್ರಾಮದ ನಿವಾಸಿ 77 ವರ್ಷದ ರೋಹ್ತಾಶ್ ವಿಶ್ವಕರ್ಮ. ಇವರು 8ನೇ ತರಗತಿಗೆ ಪ್ರವೇಶ ನೀಡುವಂತೆ ಕೋರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿ ಅಚ್ಚರಿ ಹುಟ್ಟಿಸಿದ್ದಾರೆ.
ಓದುವ ಹಂಬಲ ಹೊಂದಿರುವ 77 ವರ್ಷದ ರೋಹ್ತಾಶ್ ವಿಶ್ವಕರ್ಮ ಈ ಹಿಂದೆ ಗ್ರಾಮ ಪಂಚಾಯಿತಿ ಮುಖ್ಯಸ್ಥರಾಗಿದ್ದರು. ಇದೀಗ 8ನೇ ತರಗತಿಗೆ ಪ್ರವೇಶ ನೀಡುವಂತೆ ಜಿಲ್ಲಾಧಿಕಾರಿ ರಾಜಕಮಲ್ ಯಾದವ್ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ರೋಹ್ತಾಶ್ ಅವರು, 1958ರಲ್ಲಿ 7ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಈಗ ಹೆಚ್ಚಿನ ಅಧ್ಯಯನಕ್ಕಾಗಿ 8ನೇ ತರಗತಿಗೆ ಪ್ರವೇಶ ಪಡೆಯಲು ಇಚ್ಛಿಸುತ್ತೇನೆ. ಯಾವುದೇ ಲಿಖಿತ / ಮೌಖಿಕ ಸಂದರ್ಶನವನ್ನು ತೆಗೆದುಕೊಳ್ಳುವ ಮೂಲಕ ತನ್ನನ್ನು ಶಾಲೆಗೆ ಸೇರಿಸಬೇಕೆಂದು ಬರೆದಿದ್ದಾರೆ.
"ಹೆಚ್ಚಿನ ಅಧ್ಯಯನಕ್ಕಾಗಿ ಕೆಲವು ದಿನಗಳ ಹಿಂದೆ ಮೂಲ ಶಿಕ್ಷಣಾಧಿಕಾರಿಗೆ ಪತ್ರ ಬರೆದಿದ್ದೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಇದೀಗ ಜಿಲ್ಲಾಧಿಕಾರಿಗೆ ಪತ್ರ ಹಸ್ತಾಂತರಿಸಿದ್ದೇನೆ. ಶೀಘ್ರದಲ್ಲೇ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ" ಎಂದು ರೋಹ್ತಾಸ್ ಹೇಳಿದರು.
ಇದನ್ನೂ ಓದಿ: ದರೋಡೆಕೋರರಿಂದ ಮಾಲೀಕನ ರಕ್ಷಿಸಿದ ಬೆಕ್ಕು.. ಹೇಗೆ ಗೊತ್ತಾ?