ಮಥುರಾ(ಉತ್ತರಪ್ರದೇಶ): ಕೋತಿಗಳು ದಾಳಿ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು 3ನೇ ಮಹಡಿಯಿಂದ ಕೆಳಗೆ ಬಿದ್ದು ಸಾವಿಗೀಡಾದ ಘಟನೆ ಮಥುರಾ ಜಿಲ್ಲೆಯ ನಗರ ಕೋತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿ ನಡೆದಿದೆ. ಶಿವಲಾಲ್ ಚತುರ್ವೇದಿ ಮೃತರು.
ಘಟನೆ ಹೇಗೆ ?: ಕೋತ್ವಾಲಿ ನಗರದ ಬೆಂಗಾಲಿ ಘಾಟ್‌ನ ಮಾರುಗಲಿ ನಿವಾಸಿ ಶಿವಲಾಲ್ ಚತುರ್ವೇದಿ ಎಂಬುವರು ತಮ್ಮ ಮನೆಯ 3ನೇ ಮಹಡಿಯ ಟೆರೇಸ್‌ನಲ್ಲಿ ತಿರುಗಾಡುತ್ತಿದ್ದರು. ಇದ್ದಕ್ಕಿದ್ದಂತೆ ಕೋತಿಗಳು ದಾಳಿ ಮಾಡಿವೆ. ಇದರಿಂದಾಗಿ ಹೆದರಿದ ಶಿವಲಾಲ್ ಮೂರನೇ ಮಹಡಿಯಿಂದ ತಲೆ ಕೆಳಗಾಗಿ ಬಿದ್ದಿದ್ದಾರೆ. ಈ ವೇಳೆ ತೀವ್ರ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಶಿವಲಾಲ್ರನ್ನು ಪರೀಕ್ಷಿಸಿದ ವೈದ್ಯರು ಸಾವಿಗೀಡಾಗಿರುವುದನ್ನು ಘೋಷಿಸಿದ್ದಾರೆ.
ಮಂಗಗಳ ಕಾಟ ವಿಪರೀತ: ಮಥುರಾದಲ್ಲಿ ಮಂಗಗಳ ಕಾಟ ದಿನನಿತ್ಯ ವಿಪರೀತವಾಗಿದೆ. ಪ್ರತಿದಿನ ಮಂಗಗಳು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿವೆ. ಈವರೆಗೆ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದರೂ ಮಂಗಗಳ ಕಾಟಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಮಂಡಳಿ ಮಾತ್ರ ವಿಫಲವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಜನತೆಗೆ ನಿತ್ಯ ತೊಂದರೆ: ಮಥುರಾದ ಮುನ್ಸಿಪಲ್ ಕಾರ್ಪೊರೇಷನ್ ಕೆಲವು ಸಮಯದ ಹಿಂದೆ ಕೋತಿಗಳನ್ನು ಹಿಡಿಯುವ ಅಭಿಯಾನ ಶುರು ಮಾಡಿತ್ತು. ಆದರೆ ಅದು ಈಗ ಕೈಬಿಟ್ಟಿದೆ. ದಿನದಿಂದ ದಿನಕ್ಕೆ ಮಂಗಗಳ ಸಂಖ್ಯೆ ಏರುತ್ತಲಿದೆ. ಮಂಗಗಳ ಹಾವಳಿಯಿಂದ ಮಹಿಳೆಯರು, ಹಿರಿಯರು, ಮಕ್ಕಳು ಮನೆಯಿಂದ ಹೊರಬರಲು ಪರದಾಡುವಂತಾಗಿದೆ. ಕೈಯಲ್ಲಿ ಕೋಲು ಇಲ್ಲದೇ ಮನೆಯಿಂದ ಹೊರ ಬರುವುದು ಕಷ್ಟ. ಮಂಗಗಳು ಎಲ್ಲಿ ಬೇಕಾದರೂ ದಾಳಿ ಮಾಡುತ್ತವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂಓದಿ:ಇಬ್ಬರು ಗರ್ಭಿಣಿ ಪತ್ನಿಯರ ಫೋಟೊ ಶೇರ್.. ಟ್ರೋಲ್ಗೆ ಒಳಗಾದ ಯೂಟ್ಯೂಬರ್ ಅರ್ಮಾನ್