ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಯಾಗಿರುವ ಸುಕೇಶ್ ಚಂದ್ರಶೇಖರ್ಗೆ ಜೈಲಿನಲ್ಲಿ ಸಹಾಯ ಮಾಡಿದ ಆರೋಪ ಹೊತ್ತಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ದೆಹಲಿ ಪೊಲೀಸರಿಗೆ ಅಧಿಕಾರ ನೀಡಿದ್ದಾರೆ. ಇಲ್ಲಿನ ರೋಹಿಣಿ ಜೈಲಿನಲ್ಲಿ ಆರೋಪಿ ಸುಕೇಶ್ ಚಂದ್ರಶೇಖರ್ಗೆ ಸಹಾಯ ಮಾಡಿದ 8 ಜೈಲು ಅಧಿಕಾರಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಈ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಎಲ್ಜಿ ಅನುಮತಿ ನೀಡಿದ್ದಾರೆ.
ಅಧಿಕಾರಿಗಳ ವಿರುದ್ಧ ತನಿಖೆಗೆ ಸೂಚನೆ : ಮಾಹಿತಿ ಪ್ರಕಾರ, ಪ್ರಕರಣ ಸಂಬಂಧ ಈಗಾಗಲೇ ಬಂಧಿತರಾಗಿರುವ ಅಧಿಕಾರಿಗಳ ವಿರುದ್ಧ ಸೆಕ್ಷನ್ 17(ಎ) ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆ ನಡೆಸಲು ಸೂಚಿಸಲಾಗಿದೆ. ವಿಷಯದ ಗಂಭೀರತೆ ಮನಗೊಂಡು, ಆರೋಪಿತ ಅಧಿಕಾರಿಗಳ ವಿರುದ್ಧ ನ್ಯಾಯಸಮ್ಮತವಾದ ತನಿಖೆ ನಡೆಸಲು ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗಕ್ಕೆ ಅನುಮೋದನೆ ನೀಡಲಾಗಿದೆ.
ಈಗಾಗಲೇ ಬಂಧಿತರಾಗಿರುವ 8 ಅಧಿಕಾರಿಗಳನ್ನು ಹೊರತುಪಡಿಸಿ, ಹಣದ ಆಮಿಷಕ್ಕೆ ಒಳಗಾಗಿ ಆರೋಪಿ ಸುಕೇಶ್ ಚಂದ್ರಶೇಖರ್ಗೆ ಸಹಾಯ ಮಾಡಿದ ಆರೋಪ ಸಂಬಂಧ ಇತರ 81 ಜೈಲು ಸಿಬ್ಬಂದಿ ವಿರುದ್ಧವೂ ತನಿಖೆ ನಡೆಸಲು ಸೂಚಿಸಲಾಗಿದೆ. ಈ ಅಧಿಕಾರಿಗಳ ವಿರುದ್ಧ ಸೆಕ್ಷನ್ 7 ಮತ್ತು 8ರ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ತನಿಖೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
ಆರೋಪಿಯಿಂದ ಅಧಿಕಾರಿಗಳಿಗೆ ಆರ್ಥಿಕ ನೆರವು : ಆರೋಪಿ ಸುಕೇಶ್ ಚಂದ್ರಶೇಖರ್ ಇಲ್ಲಿನ ರೋಹಿಣಿ ಜೈಲಿನಲ್ಲಿದ್ದಾಗ ಅಧಿಕಾರಿಗಳು ಜೈಲಿನ ಒಳಗಡೆ ಐಷಾರಾಮಿ ಜೀವನ ನಡೆಸಲು ಸಹಕರಿಸಿದ್ದಾರೆ. ಮಾತ್ರವಲ್ಲದೇ ಆತನ ಗೌಪ್ಯತೆಗಳನ್ನು ಕಾಪಾಡಿದ್ದಾರೆ. ಇದರ ಜೊತೆಗೆ ಆರೋಪಿಗೆ ಜೈಲಿನೊಳಗೆ ಮೊಬೈಲ್ ಒದಗಿಸಿ, ತನ್ನ ಹೊರಗಿನ ವ್ಯವಹಾರಗಳನ್ನು ನಡೆಸಲು ಸಹಕರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಜೈಲಿನ ಅಧಿಕಾರಿಗಳು ಆರೋಪಿಯಿಂದ ಆರ್ಥಿಕ ನೆರವು ಪಡೆದಿದ್ದಾರೆ ಎಂಬ ಆರೋಪ ಇದೆ. ಈ ಬಗ್ಗೆ ತನಿಖಾಧಿಕಾರಿಗಳು ರೋಹಿಣಿ ಜೈಲಿನ ಹಲವು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಅಧಿಕಾರಿಗಳ ಫೋನ್ ಕರೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಆರೋಪಿ ಸುಕೇಶ್ ಚಂದ್ರಶೇಖರ್ ತನಗೆ ಬೇಕಾದ ಅಧಿಕಾರಿಗಳನ್ನು ಜೈಲಿನ ಕೊಠಡಿಯಲ್ಲಿ ನೇಮಿಸಿಕೊಂಡಿದ್ದ. ಈ ಅಧಿಕಾರಿಗಳು ಆರೋಪಿಯ ಅಪರಾಧ ಕೃತ್ಯಗಳಿಗೆ ಸಹಕರಿಸುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿ 2 ಮೊಬೈಲ್ ಫೋನ್ಗಳನ್ನು ಬಳಸುತ್ತಿದ್ದನು. ಜೈಲಿನ ನಿಯಮಗಳನ್ನು ಉಲ್ಲಂಘಿಸಿ ಆರೋಪಿಗೆ ಪ್ರತ್ಯೇಕ ಕೊಠಡಿ ನೀಡಿದ್ದಾರೆ. ಜೊತೆಗೆ ಜೈಲು ಅಧೀಕ್ಷಕರು ಆರೋಪಿಯಿಂದ ಆರ್ಥಿಕ ನೆರವು ಪಡೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಈಸ್ಟರ್‌ಗೆ ಶುಭ ಕೋರಿ ಜೈಲಿನಿಂದಲೇ ಜಾಕ್ವೆಲಿನ್‌ಗೆ ಪ್ರೇಮ ಪತ್ರ ಬರೆದ ಸುಕೇಶ್ ಚಂದ್ರಶೇಖರ್