ಭುವನೇಶ್ವರ (ಒಡಿಶಾ): ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದಿದೆ. ಎಲ್ಲರೂ ಪದವಿಯನ್ನೂ ಪಡೆಯದಿದ್ದರೂ ಬಹುತೇಕರು ಶಿಕ್ಷಿತರಾಗಿದ್ದಾರೆ. ಆದರೆ ಮೂಢನಂಬಿಕೆ ಮಾತ್ರ ನಮ್ಮ ದೇಶದಲ್ಲಿ ಅಳಿದಿಲ್ಲ. ಕೆಲ ಅಂಧಾಚರಣೆಗಳು ನಮ್ಮ ನಡುವೆ ಹಾಗೇ ಉಳಿದು ಹೋಗಿವೆ. ಇದರಿಂದ ತೊಂದರೆ ಒಳಗಾಗುತ್ತಿರುವವರ ಧ್ವನಿ ಮಂದವಾಗಿಯೇ ಉಳಿದಿದೆ. ಆದರೆ ಈಗ ಮೂಢನಂಬಿಕೆ ಹೋಗಲಾಡಿಸಲು ಮಹಿಳಾ ಆಯೋಗ ಆದೇಶವನ್ನೇ ಹೊರಡಿಸಿದೆ.
ಒಡಿಶಾದಲ್ಲಿ ಇನ್ನು ಮಹಿಳಾ ಪ್ರಯಾಣಿಕರು ಕೂಡಾ ಮೊದಲಿಗೆ ಬಸ್ ಹತ್ತಬಹುದಾಗಿದೆ. ಮಹಿಳೆಯರ ಘನತೆ ಕಾಪಾಡಲು ಒಡಿಶಾ ರಾಜ್ಯ ಮಹಿಳಾ ಆಯೋಗ (ಒಎಸ್‌ಸಿಡಬ್ಲ್ಯು) ಆದೇಶ ಒಂದನ್ನು ಹೊರಡಿಸಿದೆ. ಅದರಂತೆ ಸಾರಿಗೆ ಇಲಾಖೆ ಮಹಿಳೆಯನ್ನು 1ನೇ ಪ್ರಯಾಣಿಕರಂತೆ ಬಸ್ ಹತ್ತುವುದನ್ನು ತಡೆಯುವಂತಿಲ್ಲ ಎಂದು ನಿರ್ದೇಶನ ನೀಡಿದೆ.
ಸೋನೆಪುರದ ಸಾಮಾಜಿಕ ಕಾರ್ಯಕರ್ತ ಘಾಸಿರಾಮ್ ಪಾಂಡಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಆಯೋಗ ಈ ಆದೇಶ ಹೊರಡಿಸಿದೆ. ಭುವನೇಶ್ವರದ ಬಾರಾಮುಂಡಾ ಬಸ್ ನಿಲ್ದಾಣದಲ್ಲಿ ಮೊದಲ ಪ್ರಯಾಣಿಕನಾಗಿ ಬಸ್ ಹತ್ತದಂತೆ ಮಹಿಳೆಯೊಬ್ಬರು ತಾರತಮ್ಯ ಎದುರಿಸುತ್ತಿದ್ದಾರೆ ಎಂದು ಪಾಂಡಾ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಒಂದು ಮೂಢನಂಬಿಕೆ ಇದೆ, ಬಸ್ ಹತ್ತುವ ಮೊದಲ ಪ್ರಯಾಣಿಕರು ಮಹಿಳೆ ಆದಲ್ಲಿ ಅದು ದುರದೃಷ್ಟಕರ ಎಂಬ ಆಚಾರ ಬೆಳದುಕೊಂಡು ಬಂದಿದೆ. ಈ ಮೂಢನಂಬಿಕೆ ಹೋಗಲಾಡಿಸಲು ರಾಜ್ಯ ಮಹಿಳಾ ಆಯೋಗ ಮಧ್ಯಪ್ರವೇಶಿಸಿದೆ. ಮಹಿಳಾ ಪ್ರಯಾಣಿಕರು ದುರದೃಷ್ಟಕರ ಎಂಬ ಕಾರಣಕ್ಕೆ ಇನ್ನು ಮುಂದೆ ಬಸ್ನಲ್ಲಿ ಮೊದಲು 1ನೇ ಪ್ರಯಾಣಿಕರಾಗಿ ಹತ್ತದಂತೆ ತಡೆಯುವುದನ್ನು ನಿಷೇಧಿಸಲಾಗಿದೆ. ಮಹಿಳೆಯರು ಎಲ್ಲಿಂದಲಾದರೂ ಬಸ್ನಲ್ಲಿ ಮೊದಲ ಪ್ರಯಾಣಿಕರಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಬಹುದು. ಈ ನಿಯಮವನ್ನು ಈಗ ರಾಜ್ಯದ ಎಲ್ಲ ಬಸ್‌ಗಳಲ್ಲಿ ಅಳವಡಿಸಲಾಗುವುದು ಎಂದು ರಾಜ್ಯ ಮಹಿಳಾ ಆಯೋಗ ರಾಜ್ಯ ಸಾರಿಗೆ ಇಲಾಖೆಗೆ ಪತ್ರ ಬರೆದಿದೆ.
21ನೇ ಶತಮಾನದಲ್ಲಿದ್ದರೂ ಹಲವಾರು ಭಾಗಗಳಲ್ಲಿ ಇನ್ನೂ ಮೂಢನಂಬಿಕೆಗಳು ಉಳಿದು ಹೋಗಿವೆ. ಅದೇ ರೀತಿ ಅನೇಕ ಬಸ್ ಚಾಲಕರು ಮತ್ತು ಕಂಡಕ್ಟರ್‌ಗಳು ಮಹಿಳೆಯರನ್ನು ಮೊದಲು ಬಸ್‌ಗೆ ಪ್ರವೇಶಿಸದಂತೆ ಅಥವಾ ಪ್ರಯಾಣಿಕರಾಗಿ ಪ್ರಯಾಣವನ್ನು ಪ್ರಾರಂಭಿಸದಂತೆ ತಡೆಯುತ್ತಿರುವುದು ಕಂಡು ಬರುತ್ತದೆ. ಅನೇಕ ಬಾರಿ ಮಹಿಳೆಯರು ಈ ತಾರತಮ್ಯ ಎದುರಿಸಬೇಕಾಗಿದೆ.
ವಿವಿಧ ಜಿಲ್ಲೆಗಳಲ್ಲಿ ಇಂತಹ ಅನೇಕ ಘಟನೆಗಳನ್ನು ಕಂಡ ನಂತರ, ಸಮಾಜ ಸೇವಕ ಘಾಶಿರಾಮ್ ಪಾಂಡಾ ಅವರು 18 ಜುಲೈ 2023 ರಂದು ಪತ್ರದ ಮೂಲಕ ರಾಜ್ಯ ಮಹಿಳಾ ಆಯೋಗಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳಾ ಆಯೋಗ ಈ ಪತ್ರದ ಆಧಾರದ ಮೇಲೆ ರಾಜ್ಯ ಸಾರಿಗೆ ಇಲಾಖೆ ಎಲ್ಲ ಜಿಲ್ಲೆಗಳ ಬಸ್ ಮಾಲೀಕರಿಗೆ ತಾರತಮ್ಯ ಮಾಡದಂತೆ ಆದೇಶ ನೀಡಿದೆ.
ಇಂತಹ ಮೂಢನಂಬಿಕೆಗಳನ್ನು ಜನರ ಮನಸ್ಸಿನಿಂದ ದೂರ ಮಾಡುವಂತೆ ಘಾಶಿರಾಮ್ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಲಕ್ಷ್ಮಿ, ದುರ್ಗಾ ಮುಂತಾದ ದೇವತೆಗಳ ಚಿತ್ರಗಳಿರುವ ಬಸ್‌ಗಳಲ್ಲಿ ಮಹಿಳೆಯರನ್ನು ಮೊದಲ ಪ್ರಯಾಣಿಕರಾಗಿ ಏಕೆ ಸ್ವೀಕರಿಸಬಾರದು. ಸಾಂಪ್ರದಾಯಿಕವಾಗಿ ಪುರುಷ ಪ್ರಯಾಣಿಕರು ಪ್ರವೇಶಿಸಬೇಕು ಎಂಬ ಕಾರಣಕ್ಕಾಗಿ ಬಸ್‌ನ ಕಂಡಕ್ಟರ್ ಮಹಿಳಾ ಪ್ರಯಾಣಿಕರನ್ನು ಹತ್ತಲು ಅನುಮತಿಸಲಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.
ಒಡಿಶಾ ಮಹಿಳಾ ಆಯೋಗದ ಅಧ್ಯಕ್ಷೆ ಮಿನಾತಿ ಬೆಹೆರಾ ಮಾತನಾಡಿ, ಲಕ್ಷ್ಮಿ ಮತ್ತು ಸರಸ್ವತಿಗೆ ಹೋಲಿಸುವ ಮಹಿಳೆಯರನ್ನು ಕೊಳಕು ಎಂದು ಒಪ್ಪಿಕೊಳ್ಳುವ ಮೂಢನಂಬಿಕೆಗಳನ್ನು ಸಂಪೂರ್ಣವಾಗಿ ತೊಡೆದುಹಾಕುವುದು ಅವಶ್ಯ ಎಂದಿದ್ದಾರೆ. ಅದೇ ರೀತಿ ಆಯೋಗದ ನಿರ್ಧಾರವನ್ನು ಮಹಿಳೆಯರು ಮತ್ತು ಯುವತಿಯರು ಸ್ವಾಗತಿಸಿದರೆ ಮತ್ತೊಂದೆಡೆ, ಮಹಿಳಾ ಆಯೋಗದ ಪತ್ರಕ್ಕೆ ಖಾಸಗಿ ಬಸ್ ಮಾಲೀಕರ ಸಂಘದಿಂದ ಅಸಮಾಧಾನ ವ್ಯಕ್ತವಾಗಿದೆ.
ಇದನ್ನೂ ಓದಿ: Shakti Scheme: ಮಹಿಳೆಯರಿಗೆ ಟ್ಯಾಪ್ & ಟ್ರಾವೆಲ್ ಸ್ಮಾರ್ಟ್ ಕಾರ್ಡ್ ವಿತರಿಸಲು ಕೆಎಸ್ಆರ್ಟಿಸಿ ಚಿಂತನೆ