ಬಾಲಸೋರ್ (ಒಡಿಶಾ): ದೇಶದ ಅತ್ಯಂತ ಭೀಕರ ರೈಲು ಅಪಘಾತಗಳಲ್ಲಿ ಒಂದಾದ ಒಡಿಶಾದ ಬಾಲಸೋರ್ ತ್ರಿವಳಿ ರೈಲು ದುರಂತದಲ್ಲಿ 280ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 800ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಅನೇಕರು ಇನ್ನೂ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ರಣಭೀಕರವಾದ ಈ ಅಪಘಾತದಲ್ಲಿ ರೈಲುಗಳೊಂದಿಗೆ ಜನರ ದೇಹಗಳು ಛಿದ್ರಗೊಂಡಿವೆ. ಅವಶೇಷಗಳಲ್ಲಿ ನೂರಾರು ಜನ ಸಿಲುಕಿ ನರಳಿದ್ದಾರೆ. ಸತತವಾದ ಬೃಹತ್ ರಕ್ಷಣಾ ಕಾರ್ಯಾಚರಣೆ ನಂತರ ಮೃತದೇಹಗಳು ಮತ್ತು ಗಾಯಾಳುಗಳನ್ನು ಹೊರ ತೆಗೆಯಲಾಗಿದೆ. ಇದೀಗ ಮೃತರ ಗುರುತು ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎರಡು ಪ್ಯಾಸೆಂಜರ್ ರೈಲುಗಳು ಮತ್ತು ಒಂದು ಗೂಡ್ಸ್ ರೈಲು ಘೋರ ದುರಂತಕ್ಕೆ ಕಾರಣವಾಗಿದ್ದು, ಇದರ ಅಪಘಾತದ ದೃಶ್ಯಗಳನ್ನು ಕಂಡು ಇಡೀ ದೇಶವೇ ಬೆಚ್ಚಿದೆ. ಮುರಿದು ಬಿದ್ದ ಕಬ್ಬಿಣದ ಅವಶೇಷಗಳು, ಒಡೆದ ಗಾಜುಗಳಲ್ಲಿ ಸಿಕ್ಕಿಬಿದ್ದ ನೂರಾರು ಜನರನ್ನು ರಕ್ಷಿಸಲು ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ ಯತ್ನಿಸುತ್ತಿದ್ದರೆ, ಮತ್ತೊಂದೆಡೆ ಪಕ್ಕದಲ್ಲಿ ಬಿಳಿ ಬಟ್ಟೆಗಳು ಮತ್ತು ಹಾಳೆಗಳಿಂದ ಮುಚ್ಚಲ್ಪಟ್ಟ ಮೃತದೇಹಗಳ ರಾಶಿ ಹೆಚ್ಚಾಗುತ್ತಿತ್ತು. ಆ್ಯಂಬುಲೆನ್ಸ್ಗಳು, ಸೈನಿಕರು ಮತ್ತು ವಾಯುಪಡೆಯ ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯದಲ್ಲಿ ತೊಡಗಿ ಗಾಯಾಳುಗಳನ್ನು ಸಾಗಿಸಿ ಜೀವ ಉಳಿಸುವ ಪ್ರಯತ್ನದಲ್ಲಿ ತೊಡಗಿದ್ದವು. ಇದರ ನಡುವೆಯೂ ರಾತ್ರಿಯಿಡೀ ಸಾವಿನ ಸಂಖ್ಯೆ ಏರಿಕೆಯಾಗಿದೆ.

ಶುಕ್ರವಾರ ರಾತ್ರಿ 10 ಗಂಟೆಯ ಹೊತ್ತಿಗೆ ನಾವು ಬದುಕುಳಿದವರನ್ನು ರಕ್ಷಿಸಲು ಸಾಧ್ಯವಾಯಿತು. ಅದರ ನಂತರ ಮೃತ ದೇಹಗಳು ಎತ್ತುವ ಸ್ಥಿತಿ.. ಎಂಬ ಒಡಿಶಾ ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ವಿಭಾಗದ ಹೇಳಿಕೆಯನ್ನು ಉಲ್ಲೇಖಿಸಿದ ಅಸೋಸಿಯೇಟೆಡ್ ಪ್ರೆಸ್‌ನ ನಿರ್ದೇಶಕ ಸುಧಾಂಶು ಸಾರಂಗಿ ಇದು ದೊಡ್ಡ ದುರಂತ, ನನ್ನ ವೃತ್ತಿಜೀವನದಲ್ಲಿ ನಾನು ಈ ರೀತಿಯದ್ದನ್ನು ನೋಡಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ: ರೈಲು ಅಪಘಾತ, ಸಾವಿನ ಸಂಖ್ಯೆ 288ಕ್ಕೆ ಏರಿಕೆ: ದುರಂತಕ್ಕೆ ಕಾರಣರಾದ ಯಾರನ್ನೂ ಬಿಡುವುದಿಲ್ಲ ಎಂದ ಪ್ರಧಾನಿ ಮೋದಿ
ಶುಕ್ರವಾರ ರಾತ್ರಿಯಿಂದ ಶನಿವಾರದವರೆಗೆ ಕನಿಷ್ಠ 280 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಈ ದುರಂತಕ್ಕೆ ಕಾರಣ ತಿಳಿಯಲು ತನಿಖೆ ಪ್ರಗತಿಯಲ್ಲಿದೆ. ರಕ್ಷಣಾ ಕಾರ್ಯ ಮುಕ್ತಾಯವಾಗಿದ್ದು, ರೈಲ್ವೆ ಹಳಿಗಳ ಸರಿಪಡಿಸಲು ಮತ್ತು ರೈಲು ಕಾರ್ಯಾಚರಣೆಯನ್ನು ಪುನಾರಂಭಿಸಲು ಅವಶೇಷಗಳನ್ನು ತೆಗೆದುಹಾಕುವ ಕಾರ್ಯ ಆರಂಭವಾಗಿದೆ ಎಂದು ರೈಲ್ವೆ ಸಚಿವಾಲಯದ ವಕ್ತಾರ ಅಮಿತಾಭ್ ಶರ್ಮಾ ತಿಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡ ಸುಮಾರು 200 ಜನರನ್ನು ಒಡಿಶಾದ ಇತರ ನಗರಗಳ ವಿಶೇಷ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ರಾಜ್ಯದ ಉನ್ನತ ಆಡಳಿತ ಅಧಿಕಾರಿ ಪಿ.ಕೆ. ಜೆನಾ ತಿಳಿಸಿದ್ದಾರೆ. ಇನ್ನೂ 200 ಜನರನ್ನು ವೈದ್ಯಕೀಯ ಚಿಕಿತ್ಸೆ ನಂತರ ಡಿಸ್ಚಾರ್ಜ್ ಮಾಡಲಾಗಿದೆ. ಉಳಿದವರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯ ನೂರಾರು ಜನರು ಸಹ ರಕ್ತದಾನ ಮಾಡಲು ಧಾವಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈಗಿನ ಸವಾಲು ಶವಗಳನ್ನು ಗುರುತಿಸುವುದು. ಸಂಬಂಧಿಕರು ಸಾಕ್ಷ್ಯವನ್ನು ಒದಗಿಸಲು ಸಾಧ್ಯವಿರುವ ಎಲ್ಲ ಶವಗಳನ್ನು ಮರಣೋತ್ತರ ಪರೀಕ್ಷೆಯ ನಂತರ ಹಸ್ತಾಂತರಿಸಲಾಗುತ್ತದೆ. ಗುರುತಿಸದಿದ್ದರೆ ನಾವು ಡಿಎನ್‌ಎ ಪರೀಕ್ಷೆ ಮತ್ತು ಇತರ ಪ್ರೋಟೋಕಾಲ್‌ಗಳಿಗೆ ಮೊರ ಹೋಗಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದೇ ವೇಳೆ ರಾತ್ರಿಯಿಡೀ 1,200 ರಕ್ಷಣಾ ಸಿಬ್ಬಂದಿ, 115 ಆಂಬ್ಯುಲೆನ್ಸ್‌ಗಳು, 50 ಬಸ್‌ಗಳು ಮತ್ತು 45 ಮೊಬೈಲ್ ಆರೋಗ್ಯ ಘಟಕಗಳು ರಕ್ಷಣಾ ಕಾರ್ಯದಲ್ಲಿ ಶ್ರಮಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಡಿಶಾದಲ್ಲಿ ಶನಿವಾರ ಶೋಕಾಚರಣೆ ಆಚರಿಸಲಾಗಿದೆ.
ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಕಾರಣವೇನು.. ಹೊರಬಿತ್ತು ಪ್ರಾಥಮಿಕ ತನಿಖಾ ಮಾಹಿತಿ