ಖುರ್ದಾ, ಒಡಿಶಾ : ಉತ್ತರಪ್ರದೇಶದ ಲಖೀಂಪುರ ಖೇರಿ ಘಟನೆ ರೀತಿಯೇ ಒಡಿಶಾದಲ್ಲೊಂದು ಘಟನೆ ಜರುಗಿದೆ. ಜನರ ಮೇಲೆ ಕಾರು ಹಾಯಿಸಿ, ಓರ್ವನ ಸಾವಿಗೆ ಕಾರಣನಾದ ಶಾಸಕನಿಗೆ ಜನರೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಖುರ್ದಾ ಜಿಲ್ಲೆಯ ಬಾನ್‌ಪುರ್ ಬ್ಲಾಕ್ ಆಫೀಸ್ ಬಳಿ ಶಾಸಕ ಪ್ರಶಾಂತ್ ಜಗದೇವ್ ಅವರು ತಮ್ಮ ವಾಹನವನ್ನು ಜನರ ಗುಂಪಿನ ಮೇಲೆ ಹರಿಸಿದ್ದು, ಈ ವೇಳೆ ಓರ್ವ ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದರಿಂದ ಆಕ್ರೋಶಗೊಂಡ ಜನರು ಶಾಸಕರಿಗೆ ಥಳಿಸಿದ್ದಾರೆ. ಇದರ ಜೊತೆಗೆ ಶಾಸಕರು ಮದ್ಯಪಾನ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ವರದಿಗಳ ಪ್ರಕಾರ, ಶಾಸಕ ಜಗದೇವ್ ಪಂಚಾಯತ್ ಅಧ್ಯಕ್ಷರ ಚುನಾವಣೆಗಾಗಿ ಬಾನ್‌ಪುರ್ ಬ್ಲಾಕ್‌ಗೆ ತೆರಳುತ್ತಿದ್ದರು. ಬ್ಲಾಕ್ ಕಚೇರಿಯ ಮುಂದೆ ಸಾಕಷ್ಟು ಜನರು ನೆರೆದಿದ್ದರು. ಈ ವೇಳೆ ತಮ್ಮ ವಾಹನವನ್ನು ಜನರ ಮೇಲೆ ಹರಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಕರ್ತವ್ಯದಲ್ಲಿ ಒಬ್ಬ ಮಹಿಳಾ ಪೊಲೀಸ್, ಪತ್ರಕರ್ತರು ಹಾಗೂ ಸಾಮಾನ್ಯ ಜನರಿಗೆ ಗಾಯವಾಗಿದೆ. ಆಕ್ರೋಶಗೊಂಡ ಜನರು ಶಾಸಕರ ಮೇಲೆ ಹಲ್ಲೆ ಮಾಡಿದ್ದು, ಅವರ ವಾಹನವನ್ನು ಧ್ವಂಸಗೊಳಿಸಿದ್ದಾರೆ.
ಇದನ್ನು ಓದಿ: ಉಕ್ರೇನ್ ಪರ ಹೋರಾಡುತ್ತಿದ್ದ ತಮಿಳುನಾಡು ಯುವಕನಿಗೆ ದೇಶಕ್ಕೆ ಮರಳುವ ಬಯಕೆ
ಗಂಭೀರವಾಗಿ ಗಾಯಗೊಂಡ ಶಾಸಕರನ್ನು ರಕ್ಷಿಸಿದ ಪೊಲೀಸರು ಭುವನೇಶ್ವರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದಾರೆ. ಗೂಂಡಾಗಿರಿಯ ಕಾರಣಕ್ಕೆ ಶಾಸಕರು ಆಗಾಗ ಸುದ್ದಿಯಾಗುತ್ತಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಬಿಜೆಪಿ ಮುಖಂಡನ ಮೇಲೆ ಹಲ್ಲೆ ಮಾಡಿ ಬಿಜೆಡಿ ಪಕ್ಷದಿಂದ ಅಮಾನತುಗೊಂಡಿದ್ದರು.