ಕಟಕ್(ಒಡಿಶಾ): ಮುಖ ಮುಚ್ಚಿಕೊಂಡು ಎಟಿಎಂ ದರೋಡೆ ಮಾಡುವ ಖದೀಮರನ್ನು ಮಟ್ಟ ಹಾಕಲು ಒಡಿಶಾ ಹೈಕೋರ್ಟ್ ಹೊಸದೊಂದು ಮಾಸ್ಟರ್ ಫ್ಲಾನ್ ರೂಪಿಸಿದೆ. ರಾಜ್ಯದಲ್ಲಿ ಹಲವು ಬಾರಿ ಎಟಿಎಂಗಳಿಂದ ಹಣ ಲೂಟಿಯಾಗುವ ಪ್ರಕರಣಗಳು ಹೆಚ್ಚುತ್ತಿದೆ. ದರೋಡೆಕೋರರು ತಮ್ಮ ಮುಖ ಮುಚ್ಚಿಕೊಂಡು ಮತ್ತೊಬ್ಬರ ಎಟಿಎಂನಿಂದ ಹಣ ದೋಚಿದರೆ, ಇನ್ನೊಮ್ಮೆ ಎಟಿಎಂ ಮೆಷಿನ್ ಒಡೆದು ಹಣ ಕದಿಯುತ್ತಾರೆ. ಮುಖಕ್ಕೆ ಮಂಕಿ ಕ್ಯಾಪ್, ಮಾಸ್ಕ್ಗಳನ್ನು ಬಳಸಿ ಅಪರಾಧ ಎಸೆಗುವುದರಿಂದ ಪೊಲೀಸರು ಇವರನ್ನು ಪತ್ತೆ ಹಚ್ಚಲು ಹರಸಾಹಸ ಪಡೆಬೇಕಾಗುತ್ತದೆ.
ಇದೆಲ್ಲವನ್ನು ಗಮನಿಸಿದ ಒಡಿಶಾ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ. ಅದೇನೆಂದರೆ ಬ್ಯಾಂಕ್ ಎಟಿಎಂಗಳಲ್ಲಿ ಮುಖದ ಬಯೋಮೆಟ್ರಿಕ್ಸ್ ಗುರುತಿನ ಪ್ರಕ್ರಿಯೆಯನ್ನು ಪರಿಚಯಿಸಲು ನ್ಯಾಯಾಲಯವು ಒತ್ತು ನೀಡಿದೆ. ಹೌದು, ಎಲ್ಲಾ ಸ್ವಯಂಚಾಲಿತ ಟೆಲ್ಲರ್ ಮೆಷಿನ್‌ಗಳಲ್ಲಿ (ಎಟಿಎಂ) ಮುಖದ ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆಯನ್ನು ಅಳವಡಿಸುವಂತೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಫೇಶಿಯಲ್ ಬಯೋಮೆಟ್ರಿಕ್ಸ್ ಐಡೆಂಟಿಫಿಕೇಷನ್ ಎಂದರೇನು? : ಎಟಿಎಂಗಳಲ್ಲಿ ಫೇಶಿಯಲ್ ಬಯೋಮೆಟ್ರಿಕ್ ಅಳವಡಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ಬ್ಯಾಂಕಿಂಗ್ ಅಧಿಕಾರಿಗಳೊಂದಿಗೆ ಚರ್ಚಿಸಲು ರಾಜ್ಯಕ್ಕೆ ಹೈಕೋರ್ಟ್ ಸೂಚಿಸಿದೆ. ಫೇಶಿಯಲ್ ಬಯೋಮೆಟ್ರಿಕ್ಸ್ ಐಡೆಂಟಿಫಿಕೇಷನ್ ವ್ಯವಸ್ಥೆಯಿಂದ , ಬಳಕೆದಾರರು ಮೊದಲು ಎಟಿಎಂನ ಕ್ಯಾಮೆರಾದ ಮುಂದೆ ತನ್ನ ಮುಖವನ್ನು ತೋರಿಸಬೇಕು. ಬಳಿಕ ಎಟಿಎಂ ಕ್ಯಾಮೆರಾವು ಮೊದಲು ಬಳಕೆದಾರರನ್ನು ಪತ್ತೆ ಹಚ್ಚುತ್ತದೆ. ನಂತರ ತಮ್ಮ ಹಣವನ್ನು ತೆಗೆದುಕೊಳ್ಳಲು ಅನುಮತಿ ನೀಡುತ್ತದೆ. ಎಟಿಎಂ ಭದ್ರತಾ ಕ್ಯಾಮೆರಾಗಳು ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಬಹುದು ಅಲ್ಲದೇ ರೆಕಾರ್ಡ್ ಕೂಡ ಮಾಡಬಹುದು. ಅಗತ್ಯವಿದ್ದರೆ, ಅಕ್ರಮ ಎಟಿಎಂ ವಹಿವಾಟುಗಳನ್ನು ತಡೆಯಬಹುದು.
ಇಷ್ಟಲ್ಲದೆ, ಬೇರೆಯವರ ಎಟಿಎಂ ಕಾರ್ಡ್ ಮತ್ತು ಅದರ ಪಿನ್ ಸಂಖ್ಯೆಯನ್ನು ಕದ್ದು ನಿಜವಾದ ಖಾತೆದಾರರಿಗೆ ಗೊತ್ತಿಲ್ಲದೇ ಯಾರಾದರೂ ಹಣವನ್ನು ಹಿಂಪಡೆದರೆ, ಅದನ್ನು ಸಹ ದಾಖಲಿಸಬಹುದು. ಎಟಿಎಂ ಕಾರ್ಡ್ ಬಳಸಿ ಅಕ್ರಮ ಹಿಂಪಡೆದಿದ್ದಲ್ಲಿ, ಸಂಬಂಧಪಟ್ಟ ವ್ಯಕ್ತಿಯನ್ನು ಗುರುತಿಸಬಹುದು. ಇದು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಗುರುತಿಸಲು ತನಿಖಾ ಸಂಸ್ಥೆಗಳಿಗೆ ಸುಲಭವಾಗುತ್ತದೆ.
ಮಹತ್ವ ನಿರ್ಧಾರಕ್ಕೆ ಕಾರಣ: ಭದ್ರಕ್‌ನಲ್ಲಿ ಬಾಲಕಿಯ ಅಪಹರಣ ಪ್ರಕರಣದಲ್ಲಿ ಸಂತ್ರಸ್ತೆಯ ಕುಟುಂಬ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಗಮ್ ಕುಮಾರ್ ಸಾಹು ಮತ್ತು ನ್ಯಾಯಮೂರ್ತಿ ಚಿತ್ತರಂಜನ್ ದಾಸ್ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ನಲ್ಲಿ ವಿಚಾರಣೆ ನಡೆಸುತ್ತಿರುವಾಗ ಸಂತ್ರಸ್ತ ಬಾಲಕಿಯ ತಾಯಿಯ ಎಟಿಎಂ ಖಾತೆ ದರೋಡೆಯಾಗಿರುವ ವಿಚಾರ ಬೆಳಕಿಗೆ ಬರುತ್ತದೆ. ಇದರಿಂದ ಒಡಿಶಾ ನ್ಯಾಯಲಯ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಲು ಮತ್ತು 'ಮುಖದ ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆ'ಗಾಗಿ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಇದನ್ನೂ ಓದಿ: "ನ್ಯಾಯಾಲಯ ತಾರೀಖ್ ಪೆ ತಾರೀಖ್ ಆಗಲು ಸಾಧ್ಯವಿಲ್ಲ..ಅನಗತ್ಯವಾಗಿ ಪ್ರಕರಣಗಳನ್ನು ಮುಂದೂಡಬೇಡಿ" ಸಿಜೆಐ ಚಂದ್ರಚೂಡ್