ಚಮೋಲಿ (ಉತ್ತರಾಖಂಡ): ಹಿಂದೂ ಧರ್ಮೀಯರ ಪವಿತ್ರ ಯಾತ್ರಾಸ್ಥಳ ಉತ್ತರಾಖಂಡದ ಕೇದಾರನಾಥ ದೇವಾಲಯದ ಬಾಗಿಲು ತೆರೆದಿದ್ದು, ಭಕ್ತರ ದರ್ಶನಕ್ಕಾಗಿ ಮುಕ್ತವಾಗಿದೆ. ಕಳೆದ ಕೆಲ ವರ್ಷಗಳಿಗೆ ಹೋಲಿಕೆ ಮಾಡಿದಾಗ ಈ ಸಲ ಹೆಚ್ಚಿನ ಭಕ್ತರು ಚಾರಧಾಮ್ ಯಾತ್ರೆ ಹಮ್ಮಿಕೊಳ್ಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಚಾರಧಾಮ್ ಯಾತ್ರೆಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಲು ಅನೇಕ ಕಾರಣಗಳಿವೆ.
ಇದರಲ್ಲಿ ಪ್ರಧಾನಿ ಮೋದಿ ಇದುವರೆಗೆ ಹಲವು ಸಲ ಕೇದಾರನಾಥ ಸನ್ನಿಧಿಗೆ ಭೇಟಿ ನೀಡಿರುವುದು ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಚಾರಧಾಮ್ ಯಾತ್ರಾ ಮಾರ್ಗದಲ್ಲಿನ ವ್ಯವಸ್ಥೆ ಮೊದಲಿಗಿಂತಲೂ ಉತ್ತಮವಾಗಿರುವುದು. ಕೋವಿಡ್ನಿಂದಾಗಿ ಕಳೆದ ಎರಡು ವರ್ಷಗಳ ಕಾಲ ಜನರು ಮನೆಯಿಂದ ಹೊರಬಂದಿಲ್ಲ. ಆದರೆ, ಈ ಸಲ ಕೋವಿಡ್ನ ಎಲ್ಲ ನಿರ್ಬಂಧ ಸಡಿಲುಗೊಳಿಸಲಾಗಿದ್ದು, ಹೀಗಾಗಿ ಹೆಚ್ಚಿನ ಭಕ್ತರು ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಕೇದಾರನಾಥ ದೇವಸ್ಥಾನದ ಜೊತೆಗೆ ಬದರಿನಾಥ,ಗಂಗೋತ್ರಿ ಮತ್ತು ಯಮನೋತ್ರಿಗೂ ಹೆಚ್ಚಿನ ಭಕ್ತರು ಭೇಟಿ ನೀಡಲು ಶುರು ಮಾಡಿದ್ದಾರೆ.
ಸುಮಾರು 12 ವರ್ಷಗಳ ಹಿಂದೆ ಅಂದರೆ 2010ರವರೆಗೆ ಈ ಸ್ಥಳಕ್ಕೆ ಕೇವಲ ಬೆರಳು ಎಣಿಕೆಯಷ್ಟು ಭಕ್ತರು ಭೇಟಿ ನೀಡುತ್ತಿದ್ದರು. ಆದರೆ, ಕಳೆದ 8 ರಿಂದ 10 ವರ್ಷಗಳಲ್ಲಿ ಎಲ್ಲವೂ ಬದಲಾಗಿದೆ. ಚಾರಧಾಮ್ ಯಾತ್ರೆಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಸುಮಾರು 30 ರಿಂದ 40 ಲಕ್ಷ ತಲುಪಿದೆ.
2013ರ ಭೀಕರ ಪ್ರವಾಹ ದುರಂತ: ಇದರ ಬಗ್ಗೆ ಮಾತನಾಡಿರುವ ಹಿರಿಯ ಪತ್ರಕರ್ತ ಹಾಗೂ ಸುಂದರ್ ಲಾಲ್ ಬಹುಗುಣ ಅವರ ಪುತ್ರ ರಾಜೀವ್ ನಯನ್ ಬಹುಗುಣ, ಕಳೆದ 10 ವರ್ಷಗಳಲ್ಲಿ ಚಾರಧಾಮ್ ಯಾತ್ರೆ ಟ್ರೆಂಡ್ ಆಗಿ ಬದಲಾಗಿದೆ. 2013ರಲ್ಲಿ ಸಂಭವಿಸಿದ ಪ್ರವಾಹ ದುರಂತದ ಬಳಿಕ ಅನೇಕರು ಹೆಲಿಕಾಪ್ಟರ್ ಮೂಲಕ ಇಲ್ಲಿಗೆ ಭೇಟಿ ನೀಡ್ತಿದ್ದು, ಇದೀಗ ಎಲ್ಲವೂ ಬದಲಾಗಿದೆ. ಇಷ್ಟೊಂದು ದೊಡ್ಡ ಮಟ್ಟದ ಪ್ರವಾಹ ಸಂಭವಿಸಿದ ಬಳಿಕ ಕೇದಾರನಾಥ ದೇಗುವ ಸುರಕ್ಷಿತವಾಗಿ ಉಳಿದುಕೊಂಡಿರುವುದು ಸಹ ದೇಶ-ವಿದೇಶದ ಭಕ್ತರಲ್ಲಿ ದೊಡ್ಡ ಪ್ರಶ್ನೆಯಾಗಿ ಉದ್ಭವವಾಗಿತ್ತು. ಹೀಗಾಗಿ, ಜನರಲ್ಲಿ ನಂಬಿಕೆ ಸಹ ಹೆಚ್ಚಾಗಿ, ಕೇದಾರನಾಥಕ್ಕೆ ಬರುವ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಮೋದಿ ಕೇದಾರನಾಥ ಧಾಮ್ ಭೇಟಿ: 2013ರ ದುರಂತಕ್ಕೂ ಮೊದಲು ಕೇದಾರನಾಥಕ್ಕೆ ಪ್ರತಿ ವರ್ಷ 10ರಿಂದ 12 ಲಕ್ಷ ಭಕ್ತರು ಭೇಟಿ ನೀಡುತ್ತಿದ್ದರು. ಆದರೆ, ಭೀಕರ ದುರಂತದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ, ಕೇದಾರನಾಥ ದೇಗುಲ ಪುನರನಿರ್ಮಾಣದ ಕಾರ್ಯಗಳ ಬಗ್ಗೆ ತಮ್ಮ ಕಚೇರಿಯಿಂದ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಇದು ಜನರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿತು. ಇದರ ಜೊತೆಗೆ ಮೋದಿ ಖುದ್ದಾಗಿ ಅನೇಕ ಸಲ ಈ ಧಾಮಕ್ಕೆ ಭೇಟಿ ನೀಡಿದ್ದು, ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ ಭಕ್ತರ ಗಮನ ಸೆಳೆದಿದ್ದಾರೆ. 2014ರಲ್ಲಿ ಮೋದಿ ಪ್ರಧಾನಿ ಆಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಮೊದಲ ಅವಧಿಯಲ್ಲೇ ಒಟ್ಟು ನಾಲ್ಕು ಸಲ ಈ ಸ್ಥಳಕ್ಕೆ ಭೇಟಿ ನೀಡಿದ್ದರು. ಇದಾದ ಬಳಿಕ 2021ರಲ್ಲೂ ನಮೋ ಇಲ್ಲಿಗೆ ಆಗಮಿಸಿ, ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು.
ಕೇದಾರನಾಥ ದೇವಾಲಯದ ಮೇಲೆ ಚಿತ್ರಗಳು ಸಹ ನಿರ್ಮಾಣಗೊಂಡಿದ್ದು, ಭಕ್ತರ ಮೇಲೆ ಹೆಚ್ಚಿನ ಪರಿಣಾಮ ಬೀರಿವೆ.ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ಯೋಗಿ ಆದಿತ್ಯನಾಥ್ ಸೇರಿದಂತೆ ಅನೇಕ ಪ್ರಮುಖರು ಇಲ್ಲಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೇ ಕಾರಣಕ್ಕಾಗಿ ಹೆಚ್ಚಿನ ಭಕ್ತರು ಇಲ್ಲಿಗೆ ಆಗಮಿಸಲು ಶುರು ಮಾಡಿದ್ದಾರೆ.
ಆರು ದಿನದಲ್ಲಿ 20 ಸಾವು: ಉತ್ತರಾಖಂಡದಲ್ಲಿ ಚಾರ್ಧಾಮ್ ಯಾತ್ರೆ ಪ್ರಾರಂಭವಾದ ಆರು ದಿನಗಳಲ್ಲಿ ಇಪ್ಪತ್ತು ಜನರು ಸಾವನ್ನಪ್ಪಿದ್ದಾರೆ. ಯಾತ್ರಾರ್ಥಿಗಳ ಹೆಚ್ಚಿನ ಸಾವುಗಳು ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಇತರ ಹಿಮಾಲಯದ ಕಾಯಿಲೆಯಿಂದ ಉಂಟಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ವರದಿ ಮಾಡಿದೆ.
ಮೇ 3 ರಂದು ಅಕ್ಷಯ ತೃತೀಯ ಸಂದರ್ಭದಲ್ಲಿ ಗಂಗೋತ್ರಿ ಮತ್ತು ಯಮನೋತ್ರಿ ಧಾಮದ ಬಾಗಿಲು ತೆರೆದಾಗ ಚಾರ್ಧಾಮ್ ಯಾತ್ರೆ ಪ್ರಾರಂಭವಾಗಿತ್ತು. ಚಾರ್ಧಾಮ್ ಯಾತ್ರೆಯ ಆಡಳಿತದಿಂದ ಪಡೆದ ಮಾಹಿತಿಯ ಪ್ರಕಾರ, ಸೋಮವಾರದವರೆಗೆ ಯಮುನೋತ್ರಿ ಮತ್ತು ಗಂಗೋತ್ರಿ ಧಾಮ್‌ನಲ್ಲಿ ಒಬ್ಬ ನೇಪಾಳಿ ಕಾರ್ಮಿಕ ಸೇರಿದಂತೆ 14 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಆದರೆ ಕೇದಾರನಾಥದಲ್ಲಿ ಐವರು ಭಕ್ತರು ಸಾವನ್ನಪ್ಪಿದ್ದಾರೆ ಮತ್ತು ಬದರಿನಾಥ ಧಾಮದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಚಾರ್‌ಧಾಮ್‌ನಲ್ಲಿ ಸಾವಿನ ಸಂಖ್ಯೆಯ ನಡುವೆ, ಯಾತ್ರೆಯ ಸಂಘಟಕರು ಮತ್ತು ಆಡಳಿತವು ಚಿಂತಿತವಾಗಿದೆ. ಅತಿಯಾದ ನಡಿಗೆಯಿಂದ ವೃದ್ಧರು ಮತ್ತು ಅನಾರೋಗ್ಯ ಪೀಡಿತ ಯಾತ್ರಾರ್ಥಿಗಳು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ