ನವದೆಹಲಿ: ಈ ವರ್ಷದ ಸೆಪ್ಟೆಂಬರ್ ಅಂತ್ಯಕ್ಕೆ ದೇಶದಲ್ಲಿ ಎಟಿಎಂಗಳ ಸಂಖ್ಯೆ 2.13 ಲಕ್ಷ ದಾಟಿವೆ ಎಂದು ಹಣಕಾಸು ಸಚಿವಾಲಯ ಅಧಿವೇಶನದಲ್ಲಿ ತಿಳಿಸಿದೆ. ಇವುಗಳಲ್ಲಿ ಶೇ.47ರಷ್ಟು ಗ್ರಾಮೀಣ ಮತ್ತು ಅರೆ ನಗರ ಪ್ರದೇಶದಲ್ಲಿವೆ ಅಂತಲು ಮಾಹಿತಿ ನೀಡಿದೆ.
ಆರ್ಬಿಐ ದತ್ತಾಂಶದ ಪ್ರಕಾರ, ನಿಗದಿತ ವಾಣಿಜ್ಯ ಬ್ಯಾಂಕುಗಳು ಸೆಪ್ಟೆಂಬರ್ 2021ರ ವರೆಗೆ 2,13,145 ಎಟಿಎಂಗಳನ್ನು ಸ್ಥಾಪಿಸಿವೆ. ಇದರ ಜೊತೆಗೆ, 27,837 ವೈಟ್ ಲೇಬಲ್ ಎಟಿಎಂಗಳನ್ನು (WLA) ಸಹ ಸ್ಥಾಪಿಸಲಾಗಿದೆ ಎಂದು ಹಣಕಾಸು ರಾಜ್ಯ ಖಾತೆ ಸಚಿವ ಭಾಗವತ್ ಕರದ್ ಲೋಕಸಭೆಗೆ ಲಿಖಿತ ರೂಪದ ಉತ್ತರದಲ್ಲಿ ತಿಳಿಸಿದ್ದಾರೆ. ವೈಟ್ ಲೇಬಲ್ ಎಟಿಎಂ ಎಂದರೆ ಬ್ಯಾಂಕ್ ಹೊರತಾಗಿ ಖಾಸಗಿ ಸಂಸ್ಥೆಗಳು ಸ್ಥಾಪಿಸಲ್ಪಟ್ಟ ಎಟಿಎಂಗಳಾಗಿವೆ.
ಇವುಗಳಲ್ಲಿ ಶೇ 47.4ರಷ್ಟು ಎಟಿಎಂಗಳನ್ನು ಗ್ರಾಮೀಣ ಮತ್ತು ಅರೆನಗರ ಕೇಂದ್ರಗಳಲ್ಲಿ ಅಳವಡಿಸಲಾಗಿದೆ ಎಂದು ಕರದ್ ಮಾಹಿತಿ ನೀಡಿದ್ದಾರೆ. 2022ರ ವೇಳೆಗೆ ಎಟಿಎಂಗಳನ್ನು ಸ್ಥಾಪಿಸುವ ಗುರಿಯ ಕುರಿತು ಕೇಳಿದ ಪ್ರಶ್ನೆಗೆ, ಆರ್ಬಿಐ ವೈಟ್ ಲೇಬಲ್ ಎಟಿಎಂ ಸ್ಥಾಪನೆ ಕುರಿತು ಹರ್ಷ ವ್ಯಕ್ತಪಡಿಸಿದೆ. ಪ್ರತಿ ವರ್ಷ 1:2:3ರ ಅನುಪಾತದಲ್ಲಿ ಮೆಟ್ರೋ ಮತ್ತು ನಗರ, ಅರೆ ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ 1 ಸಾವಿರ ಎಟಿಎಂ ಸ್ಥಾಪನೆಯ ಗುರಿ ಹೊಂದಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: Civilian killing in Nagaland: ಉಗ್ರರೆಂದು ತಪ್ಪಾಗಿ ಅರ್ಥೈಯಿಸಿ ಗುಂಡಿನ ದಾಳಿ: ಪ್ರಕರಣ SITಗೆ ನೀಡಿದ ಅಮಿತ್ ಶಾ