ನವದೆಹಲಿ: ಭಾರತ ಪ್ರವಾಸದಲ್ಲಿರುವ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಇಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಉಭಯ ನಾಯಕರ ಮಧ್ಯೆ ಪೂರ್ವ ಲಡಾಖ್ ಸೇರಿದಂತೆ ಅನೇಕ ವಿಷಯಗಳ ಕುರಿತಾಗಿ ಮಹತ್ವದ ಮಾತುಕತೆ ನಡೆದಿದೆ.
ಕಳೆದ ಕೆಲ ತಿಂಗಳಿಂದ ಭಾರತ-ಚೀನಾ ನಡುವೆ ಪೂರ್ವ ಲಡಾಖ್ನಲ್ಲಿ ಮಿಲಿಟರಿ ಬಿಕ್ಕಟ್ಟು ಉದ್ಭವಿಸಿದ್ದು, ಎರಡೂ ದೇಶದ ಯೋಧರ ಮಧ್ಯೆ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಈ ಮಾತುಕತೆ ಮಹತ್ವದ್ದಾಗಿದೆ. ಗಡಿ ಪ್ರದೇಶದಲ್ಲಿ ಉಂಟಾಗಿರುವ ಆತಂಕದ ವಾತಾವರಣವನ್ನು ಹೋಗಲಾಡಿಸುವ ನಿಟ್ಟಿನಲ್ಲಿ, ಸಮಾನತೆ ಮತ್ತು ಪರಸ್ಪರ ಪ್ರೀತಿಯ ಮನೋಭಾವನೆ ಮೂಡಿಸಲು ಕ್ರಮ ಕೈಗೊಳ್ಳುವಂತೆ ಅಜಿತ್ ದೋವಲ್ ಇದೇ ವೇಳೆ ಚೀನಾಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮದ್ಯದ ಮತ್ತಲ್ಲಿ ಪೊಲೀಸ್ ಕೊರಳಪಟ್ಟಿ ಹಿಡಿದು ಯುವತಿಯ ರಂಪಾಟ: ವಿಡಿಯೋ
ಗಡಿ ನಿಯಂತ್ರಣ ಬಳಿ ಯಾವುದೇ ರೀತಿಯ ಭದ್ರತಾ ನಿಯಮಗಳನ್ನು ಉಲ್ಲಂಘಿಸದಿರಲು ಹಾಗೂ ಎರಡು ದೇಶಗಳ ಮಧ್ಯೆ ಉಂಟಾಗಿರುವ ಗಡಿ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳಲು ಚೀನಾ ಒಪ್ಪಿಕೊಂಡಿದ್ದಾಗಿ ತಿಳಿದು ಬಂದಿದೆ. ಸಮಸ್ಯೆ ಬಗೆಹರಿದ ಬಳಿಕ ತಾವೂ ಕೂಡ ಚೀನಾಕ್ಕೆ ಭೇಟಿ ನೀಡಲು ದೋವಲ್ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಉಕ್ರೇನ್ನಲ್ಲಿ ಉಂಟಾಗಿರುವ ಸಂಘರ್ಷದ ಬಗೆಗೂ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಕಳೆದೆರಡು ವರ್ಷಗಳ ಹಿಂದೆ ಗಾಲ್ವಾನ್ ವ್ಯಾಲಿ ಪ್ರದೇಶದಲ್ಲಿ ಭಾರತ-ಚೀನಾ ನಡುವಿನ ಸಂಘರ್ಷ ನಡೆದ ಬಳಿಕ ಚೀನಾ ವಿದೇಶಾಂಗ ಸಚಿವ ಭಾರತಕ್ಕೆ ಆಗಮಿಸಿದ್ದು, ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಜೊತೆಗೂ ಮಾತುಕತೆ ನಡೆಸಿದ್ದಾರೆ.