ನವದೆಹಲಿ: ರಾಷ್ಟ್ರೀಯ ನೇಮಕಾತಿ ಏಜೆನ್ಸಿಯು (ಎನ್‌ಆರ್‌ಎ) ಮೊದಲ ಬಾರಿಗೆ ಕೇಂದ್ರ ಸರ್ಕಾರದ ಗೆಜೆಟೆಡ್ ಅಲ್ಲದ ಹುದ್ದೆಗಳ ನೇಮಕಾತಿಗಾಗಿ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ)ಯನ್ನು ಕಂಪ್ಯೂಟರ್ ಆಧಾರಿತ ಆನ್‌ಲೈನ್ ಮೂಲಕ ವರ್ಷಾಂತ್ಯದೊಳಗೆ ನಡೆಸಲಿದೆ ಎಂದು ಸಿಬ್ಬಂದಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.
ನವದೆಹಲಿಯ ಉತ್ತರ ಬ್ಲಾಕ್‌ನಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಅಡಿಯಲ್ಲಿ ಎಲ್ಲಾ ಆರು ಸ್ವಾಯತ್ತ ಸಂಸ್ಥೆಗಳ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನ್-ಗೆಜೆಟೆಡ್ ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ ಸಾಮಾನ್ಯ ಆನ್‌ಲೈನ್ ಪರೀಕ್ಷೆಯನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಈ ವರ್ಷ ಪ್ರಾರಂಭವಾಗಲಿದೆ ಎಂದು ಹೇಳಿದರು. ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಪರೀಕ್ಷಾ ಕೇಂದ್ರವಿದ್ದು, ಇದು ಉದ್ಯೋಗಾಕಾಂಕ್ಷಿಗಳಿಗೆ ಸುಲಭವಾಗಿ ನೇಮಕಾತಿಯನ್ನು ಒದಗಿಸುವಂತಹ ಗೇಮ್ ಚೇಂಜರ್ ಆಗಲಿದೆ. ಯುವಕರಿಗೆ ಅದರಲ್ಲಿಯೂ ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವಂತಹ ಯುವಕರಿಗೆ ವರದಾನವಾಗಲಿದೆ ಎಂದು ವಿವರಿಸಿದರು.
ಈ ಐತಿಹಾಸಿಕ ಸುಧಾರಣೆಯು ಎಲ್ಲಾ ಅಭ್ಯರ್ಥಿಗಳಿಗೆ ಅವರ ಹಿನ್ನೆಲೆ, ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ಮೀರಿ ಉದ್ಯೋಗದ ಅವಕಾಶವನ್ನು ಒದಗಿಸುತ್ತದೆ. ಅನೇಕ ಕೇಂದ್ರಗಳಿಗೆ ಅಲೆದಾಡಿ ಪರೀಕ್ಷೆ ಬರೆಯುವುದು ತಪ್ಪುವುದರಿಂದ ಮಹಿಳೆಯರು, ಅಂಗವಿಕಲ ಅಭ್ಯರ್ಥಿಗಳಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಅತ್ಯಂತ ಪ್ರಯೋಜನಕಾರಿ ಎಂದು ತಿಳಿಸಿದರು.
ಗೆಜೆಟೆಡ್ ಅಲ್ಲದ ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ: ಆರಂಭದಲ್ಲಿ ಹಿಂದಿ, ಇಂಗ್ಲಿಷ್ ಸೇರಿದಂತೆ 12 ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಉಲ್ಲೇಖಿಸಲಾದ ಎಲ್ಲಾ ಭಾಷೆಗಳಲ್ಲೂ ಪರೀಕ್ಷೆ ನಡೆಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಪರಿಚಯಿಸಿದ 'ಸಂಪೂರ್ಣ ಸರ್ಕಾರದ' ಪರಿಕಲ್ಪನೆ, ಕೇವಲ ಕೆಟ್ಟದ್ದನ್ನು ತೆಗೆದುಹಾಕಿದ್ದು ಮಾತ್ರವಲ್ಲದೆ, ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಏಜೆನ್ಸಿಗಳು ಪ್ರತಿಯೊಂದು ಸಮಸ್ಯೆಯನ್ನು ಒಟ್ಟಾಗಿ ಪರಿಹರಿಸುವ ಮೂಲಕ ಸಮಗ್ರ ವಿಧಾನವನ್ನೂ ಸಹ ಅನುಷ್ಟಾನಗೊಳಿಸಿದೆ ಎಂದು ಹೇಳಿದರು.
DoPT ಯ ಮೂರು ಸ್ವಾಯತ್ತ ಸಂಸ್ಥೆಗಳ ವಿಲೀನ: ಜಿತೇಂದ್ರ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಎಲ್ಲಾ ಆರು ಸ್ವಾಯತ್ತ ಸಂಸ್ಥೆಗಳಾದ ರಾಷ್ಟ್ರೀಯ ನೇಮಕಾತಿ ಸಂಸ್ಥೆ (NRA), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ (IIPA), ನಾಗರಿಕ ಸೇವಾ ಅಧಿಕಾರಿಗಳ ಸಂಸ್ಥೆ (CSOI), ಗ್ರಿಹ್ ಕಲ್ಯಾಣ್ ಕೇಂದ್ರಗಳು (GKK), ಕೇಂದ್ರೀಯ ನಾಗರಿಕ ಸೇವೆಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಮಂಡಳಿ (CCSCSB) ಮತ್ತು ಕೇಂದ್ರೀಯ ಭಂಡಾರ್ (ನೋಂದಾಯಿತ ಬಹು-ರಾಜ್ಯ ಸಹಕಾರ ಸಂಘಗಳ ಕಾಯ್ದೆ) ಮುಖ್ಯಸ್ಥರು ಸಂಸ್ಥೆಗಳ ಆದೇಶ, ಕೆಲಸ, ಬಜೆಟ್, ಗುರಿಗಳು ಮತ್ತು ಉದ್ದೇಶಗಳ ಬಗ್ಗೆ ವಿವರಿಸಿದರು.
ವೆಚ್ಚ ಇಲಾಖೆಯ ಆದೇಶಕ್ಕೆ ಅನುಗುಣವಾಗಿ, ಅತಿಕ್ರಮಿಸುವ ಆದೇಶಗಳು, ಗುರಿಗಳು ಮತ್ತು ಉದ್ದೇಶಗಳ ಕಾರಣದಿಂದ ಗೃಹ ಕಲ್ಯಾಣ ಕೇಂದ್ರಗಳು (ಜಿಕೆಕೆ) ಮತ್ತು ಕೇಂದ್ರ ನಾಗರಿಕ ಸೇವೆಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಮಂಡಳಿ (ಸಿಸಿಎಸ್‌ಸಿಎಸ್‌ಬಿ) ವಿಲೀನದ ಸಾಧ್ಯತೆಯನ್ನು ಅನ್ವೇಷಿಸಲು ಸಿಂಗ್ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಡಿಒಪಿಟಿಯ ಮೂರು ಸ್ವಾಯತ್ತ ಸಂಸ್ಥೆಗಳ ಸಂಭವನೀಯ ವಿಲೀನದ ವರದಿಯನ್ನು ಒಂದು ತಿಂಗಳಲ್ಲಿ ಸಲ್ಲಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಕುತುಬ್ ಮಿನಾರ್ ಉತ್ಖನನಕ್ಕೆ ಸರ್ಕಾರ ಆದೇಶ ನೀಡಿಲ್ಲ: ಕೇಂದ್ರ ಸಚಿವ ಜಿ.ಕೆ.ರೆಡ್ಡಿ