ರುದ್ರಪ್ರಯಾಗ: ಉತ್ತರಾಖಂಡದ ಪ್ರಸಿದ್ಧ ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಶಿವ ಭಕ್ತರು ತಮ್ಮೊಂದಿಗೆ ಸಣ್ಣ ಶಿವ ಲಿಂಗಗಳನ್ನು ಪ್ರಸಾದದ ರೂಪದಲ್ಲಿ ಪಡೆಯಲಿದ್ದಾರೆ. ಅಷ್ಟೇ ಅಲ್ಲ, ದೇವಾಲಯದ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿರುವುದರಿಂದ ಭಕ್ತರು ಆದಿ ಗುರು ಶಂಕರಾಚಾರ್ಯರ ಸಮಾಧಿ ಸ್ಥಳ ವೀಕ್ಷಣೆ ಮತ್ತು ನವೀಕರಿಸಿದ ಮೂರು ಗುಹೆಗಳಲ್ಲಿ ಧ್ಯಾನ ಮಾಡಬಹುದಾಗಿದೆ.
ಕೇದಾರಪುರಿ ಕಲ್ಲುಗಳಿಂದ ಇಲ್ಲಿಯವರೆಗೆ ಹತ್ತು ಸಾವಿರಕ್ಕೂ ಹೆಚ್ಚು ಶಿವ ಲಿಂಗಗಳನ್ನು ತಯಾರಿಸಲಾಗಿದ್ದು, ಮುಂದಿನ ವರ್ಷ ವುಡ್ ಸ್ಟೋನ್ ಕನ್ಸ್ಟ್ರಕ್ಷನ್ ಕಂಪನಿಯು ದೇವಾಲಯವನ್ನು ತೆರೆಯುವ ಮೊದಲು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಶಿವಲಿಂಗಗಳನ್ನು ಸಿದ್ಧಪಡಿಸಲಾಗುವುದು ಎಂದಿದೆ.
ಮಂದಾಕಿನಿ ಮತ್ತು ಸರಸ್ವತಿ ನದಿಯ ದಡದಲ್ಲಿ ಸಿಗುವ ಸಣ್ಣ ದುಂಡನೆಯ ಕಲ್ಲುಗಳನ್ನು ಸಂಗ್ರಹಿಸಿ ಅವುಗಳನ್ನು ಗಂಗಾ ನದಿಯ ಪವಿತ್ರ ನೀರಿನಿಂದ ಸ್ವಚ್ಛಗೊಳಿಸಿ ನಂತರ ಲಿಂಗದ ರೂಪದಲ್ಲಿ ಕೆತ್ತಲಾಗುತ್ತದೆ.
2021 ರಲ್ಲಿ, ಯಾತ್ರೆ ಪುನಾರಂಭವಾದ ನಂತರ, ಈ ಶಿವಲಿಂಗಗಳನ್ನು ಕೇದಾರನಾಥ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿರುವ ವಿವಿಧ ಸ್ಟಾಲ್‌ಗಳಲ್ಲಿ ದೇಶ ಮತ್ತು ವಿದೇಶದ ಭಕ್ತರಿಗೆ ಕಡಿಮೆ ಬೆಲೆಗೆ ಲಭ್ಯವಾಗುವಂತೆ ಮಾಡಲಾಗುವುದು.
ಕೇದಾರನಾಥದ ಸ್ಥಳೀಯ ಯುವಕರಿಗೆ ಉದ್ಯೋಗವನ್ನು ಒದಗಿಸಲು ಮತ್ತು ಆಧ್ಯಾತ್ಮಿಕತೆಯನ್ನು ಉತ್ತೇಜಿಸಲು ಪಿಎಂ ಮೋದಿಯವರ 'ವೋಕಲ್ ಫಾರ್ ಲೋಕಲ್' ಅಭಿಯಾನಕ್ಕೆ ಅನುಗುಣವಾಗಿ ಶಿವ ಲಿಂಗಗಳ ನಿರ್ಮಾಣ ಕೆಲಸವನ್ನು ಕೈಗೊಳ್ಳಲಾಗಿದೆ ಎಂದು ವುಡ್ ಸ್ಟೋನ್ ಕಂಪನಿಯ ವ್ಯವಸ್ಥಾಪಕ ಮನೋಜ್ ಸೆಮ್ವಾಲ್ ಹೇಳಿದ್ದಾರೆ.