ಮುಂಬೈ: ಬಂಡಾಯ ಎದ್ದಿರುವ ಶಿವಸೇನೆ ಶಾಸಕರಿಗೆ ಶಾಕ್ ನೀಡಲು ಮಹಾ ಅಘಾಡಿ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಏಕನಾಥ ಶಿಂಧೆಗೆ ಪ್ರಬಲ ಏಟು ನೀಡಲು ಉದ್ದವ್ ಠಾಕ್ರೆ ತೀರ್ಮಾನಿಸಿದ್ದಾರೆ. 16 ಶಿವಸೇನೆ ಶಾಸಕರಿಗೆ ಅನರ್ಹತೆ ನೋಟಿಸ್ ಜಾರಿ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ.
ಏಕನಾಥ್ ಶಿಂಧೆ ಗುಂಪಿನ 16 ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಸೇನೆ ಪರವಾಗಿ ಪ್ರತೋಡ್ ಸುನೀಲ್ ಪ್ರಭು ಉಪಸಭಾಪತಿ ಅವರಿಗೆ ಒತ್ತಾಯಿಸಿದ್ದರು. ಬಂಡಾಯ ಶಾಸಕರ ಅನರ್ಹತೆ ಕುರಿತು ಚರ್ಚಿಸಲು ಉದ್ದವ್ ಠಾಕ್ರೆ ಅವರ ಶಿವಸೇನೆ ಬಣದ ನಿಯೋಗ ವಿಧಾನಸಭೆಯ ಉಪ ಸಭಾಪತಿ ನರಹರಿ ಜಿರ್ವಾಲ್ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿತ್ತು.
ಬುಧವಾರವೂ ನಡೆದಿತ್ತು ಸಭೆ: ನಿನ್ನೆ ಮಧ್ಯಾಹ್ನ ವಿಧಾನಸೌಧದಲ್ಲಿ ಉಪಸಭಾಪತಿಗಳ ಜತೆ ಆರಂಭವಾದ ಸಭೆ ಆರು ಗಂಟೆಗಳ ಕಾಲ ನಡೆಯಿತು. ಈ ಸಭೆಯ ಬಳಿಕ 16 ಸದಸ್ಯರನ್ನು ಅನರ್ಹಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಶಿವಸೇನೆ ನಾಯಕ ಸುನೀಲ್ ಪ್ರಭು ಬುಧವಾರ ಸೇನಾ ಶಾಸಕರ ಸಭೆ ಕರೆದಿದ್ದರು. ಬಂಡಾಯ ಸದಸ್ಯರು ಈ ಸಭೆಗೆ ಗೈರು ಹಾಜರಾಗಿದ್ದರು. ಶಿವಸೇನೆಯ ಹೊಸ ಬಣದ ನಾಯಕ ಅಜಯ್ ಚೌಧರಿ ಅವರು ಈ ಪ್ರಕರಣದಲ್ಲಿ ಪಕ್ಷದ ಶಿಸ್ತು ಉಲ್ಲಂಘಿಸಿದ್ದಕ್ಕಾಗಿ ಅನರ್ಹಗೊಳಿಸುವಂತೆ ವಿಧಾನಸಭೆಯ ಉಪ ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದರು.
ತಡರಾತ್ರಿ ವರೆಗೂ ಗಂಭೀರ ಚರ್ಚೆ, ಬಳಿಕ ಅನರ್ಹತೆ ನೋಟಿಸ್ ನೀಡಲು ನಿರ್ಧಾರ: ಇನ್ನು ಶುಕ್ರವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಶಿವಸೇನೆ ಮುಖಂಡರಾದ ಸುಭಾಷ್ ದೇಸಾಯಿ, ಅನಿಲ್ ದೇಸಾಯಿ, ಅಂಬಾದಾಸ್ ದಾನ್ವೆ, ಅಜಯ್ ಚೌಧರಿ ಮತ್ತು ಅರವಿಂದ್ ಸಾವಂತ್ ಉಪಸ್ಥಿತರಿದ್ದರು. ಆದರೆ, ವಿಧಾನಸಭೆಯ ಉಪಸಭಾಧ್ಯಕ್ಷರು ಸಭೆಯ ವೇಳೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ.
ಅಂತಿಮವಾಗಿ ರಾತ್ರಿ 9 ಗಂಟೆಗೆ ರಾಜ್ಯದ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಅವರನ್ನು ಕರೆದು ಅನರ್ಹತೆ ಬಗ್ಗೆ ಸಮಾಲೋಚನೆ ಮಾಡಲಾಯಿತು. ಎಲ್ಲ ಕಾನೂನು ಹಾಗೂ ಸಂವಿಧಾನದಲ್ಲಿ ಅಡಕವಾಗಿರುವ ಸಾಧಕ - ಬಾಧಕಗಳನ್ನು ಪರಾಮರ್ಶಿಸಿ, ಬಳಿಕ ತಡರಾತ್ರಿ 16 ಮಂದಿ ಬಂಡಾಯ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
16 ಶಾಸಕರಿಗೆ ಅನರ್ಹತೆ ನೋಟಿಸ್- 48 ಗಂಟೆಗಳಲ್ಲಿ ಉತ್ತರಿಸುವಂತೆ ಸೂಚನೆ: ಏತನ್ಮಧ್ಯೆ ಈ 16 ಬಂಡುಕೋರರು ತಮ್ಮ ವಾದವನ್ನು ವಿಧಾನಸಭೆಯ ಉಪ ಸ್ಪೀಕರ್ ಮುಂದೆ ಮಂಡಿಸಬೇಕಾಗುತ್ತದೆ. ಬಂಡುಕೋರರು ಸದ್ಯ ಗುವಾಹಟಿಯಲ್ಲಿದ್ದಾರೆ. ಈ 16 ಶಾಸಕರಿಗೆ 48 ಗಂಟೆಗಳ ಒಳಗೆ ತಮ್ಮ ಅಭಿಪ್ರಾಯ ಮಂಡಿಸುವಂತೆ ಸೂಚಿಸಲಾಗಿದೆ. ಉಪಸಭಾಪತಿಗಳು 16 ಶಾಸಕರ ವಾದ ಆಲಿಸಿ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಶಿವಸೇನೆ ಮುಖ್ಯ ವಕ್ತಾರ ಅರವಿಂದ್ ಸಾವಂತ್ ಹೇಳಿದ್ದಾರೆ.
ಇದನ್ನು ಓದಿ:ತೆರೆ ಹಿಂದೆ ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಹಾನಾಟಕ : ಗೆದ್ದೇ ಗೆಲ್ಲುತ್ತೇನೆಂಬ ಛಲದಲ್ಲಿ ಬಿಜೆಪಿ!