ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಗುರುವಾರ ನಡೆದಿದೆ. ಇಲ್ಲಿಯ ಶೋಪಿಯಾನ್ ಜಿಲ್ಲೆಯ ಗಗ್ರಾನ್ ಪ್ರದೇಶದಲ್ಲಿ ಇಬ್ಬರು ಮುಸುಕುಧಾರಿ ಭಯೋತ್ಪಾದಕರು, ಮೂವರು ಕಾಶ್ಮೀರೇತರ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಹಾರ ಮೂಲದ ಅನ್ಮೋಲ್ ಕುಮಾರ್, ಹೀರಾಲಾಲ್ ಯಾದವ್ ಮತ್ತು ಪಿಂಟು ಕುಮಾರ್ ಠಾಕೂರ್ ಎಂದು ಗುರುತಿಸಲಾಗಿದೆ.
ಅಧಿಕಾರಿಗಳು ಹೇಳಿದ್ದು: ರಾತ್ರಿ 8:45ರ ಸುಮಾರಿಗೆ ಇಬ್ಬರು ಮುಸುಕುಧಾರಿಗಳು ದಕ್ಷಿಣ ಕಾಶ್ಮೀರ ಜಿಲ್ಲೆಯ ಗಗ್ರಾನ್ ಗ್ರಾಮದಲ್ಲಿ ಕಾಶ್ಮೀರೇತರ ಕಾರ್ಮಿಕರ ಮನೆಗೆ ನುಗ್ಗಿ ಬಿಹಾರ ಮೂಲದ ಮೂವರು ಕಾರ್ಮಿಕರ ಮೇಲೆ ಗುಂಡು ಹಾರಿಸಿದ್ದಾರೆ. ದಾಳಿ ನಡೆದ ಪ್ರದೇಶವು ಭದ್ರತಾ ಪಡೆಗಳ ಶಿಬಿರದಿಂದ ಸುಮಾರು 150 ಮೀಟರ್ ದೂರದಲ್ಲಿದೆ. ಗಾಯಗೊಂಡ ಕಾರ್ಮಿಕರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ನಂತರ ಅವರನ್ನು ಎಸ್‌ಎಂಹೆಚ್‌ಎಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಳಿಕ ಆ ಪ್ರದೇಶದಲ್ಲಿನ ಜನರಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಭದ್ರತಾ ಪಡೆಗಳು ಘಟನಾ ಪ್ರದೇಶವನ್ನು ಸುತ್ತುವರೆದಿದ್ದು, ಭಯೋತ್ಪಾದಕರನ್ನು ಪತ್ತೆ ಹಚ್ಚು ಕಾರ್ಯ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮಾತನಾಡಿ, ಶೋಪಿಯಾನ್ನಲ್ಲಿ ನಡೆದ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಇಂತಹ ಅಮಾನುಷ ಕೃತ್ಯಗಳು ನಡೆಸುತ್ತಿದ್ದು, ಇದು ಭಯೋತ್ಪಾದಕರು ಮತ್ತು ಅವರ ಬೆಂಬಲಿಗರ ಹತಾಶೆ ಹಾಗೂ ಹೇಡಿತನವನ್ನು ತೋರಿಸುತ್ತದೆ ಎಂದು ಕಿಡಿಕಾರಿದರು. ಗಾಯಾಳುಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಎಲ್ಲ ರೀತಿಯ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ರಾಜಕೀಯ ಪಕ್ಷಗಳು ಕೂಡ ದಾಳಿಯನ್ನು ಖಂಡಿಸಿದ್ದು, ಇದು ಅತ್ಯಂತ ದುರದೃಷ್ಟಕರ ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿ ದಾಳಿಯನ್ನು ಖಂಡಿಸಿದ್ದಾರೆ. ಕಾಶ್ಮೀರೇತರರು ಮತ್ತು ಅಲ್ಪಸಂಖ್ಯಾತರ ಮೇಲೆ ಈ ವರ್ಷ ನಡೆದ ಮೂರನೇ ದಾಳಿ ಇದಾಗಿದೆ. ಫೆಬ್ರವರಿ 26 ರಂದು, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅಚೆನ್‌ನಲ್ಲಿ ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಕಾಶ್ಮೀರಿ ಪಂಡಿತರನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದರು. ಮೂರು ತಿಂಗಳ ನಂತರ ಮೇ 29 ರಂದು ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಉಧಮ್‌ಪುರ ನಿವಾಸಿ ದೀಪು ಎಂಬುವವರನ್ನು ಅನಂತನಾಗ್ ಪಟ್ಟಣದ ಜಗಲ್ಯಾಂಡ್ ಮಂಡಿ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಇದನ್ನೂ ಓದಿ: Encounter in Kulgam: ತಡರಾತ್ರಿ ಗುಂಡಿನ ದಾಳಿ.. ಉಗ್ರನೊಬ್ಬನನ್ನು ಹೊಡೆದುರುಳಿಸಿದ ಸೇನೆ!