ನವದೆಹಲಿ: ಭಾರತ - ಚೀನಾ ಗಡಿಯಲ್ಲಿ ನಡೆದ ಸೈನಿಕರ ಘರ್ಷಣೆ ವಿಷಯದ ಮೇಲೆ ಚರ್ಚೆಗೆ ಅವಕಾಶ ನೀಡದ್ದನ್ನು ಪ್ರತಿಭಟಿಸಿ ಪ್ರತಿಪಕ್ಷ ನಾಯಕರು ಜಂಟಿಯಾಗಿ ಉಭಯ ಸದನಗಳ ಕಲಾಪ ಬಹಿಷ್ಕರಿಸಿ ಹೊರನಡೆದಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ಸಂಸತ್ತಿನ ಉಭಯ ಸದನಗಳ ಕಲಾಪ ಪ್ರಾರಂಭವಾಯಿತು. ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಅರುಣಾಚಲ ಪ್ರದೇಶದಲ್ಲಿ ಭಾರತ-ಚೀನಾ ನಡುವೆ ಇತ್ತೀಚೆಗೆ ನಡೆದ ಘರ್ಷಣೆಗಳ ಕುರಿತು ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದವು. ಈ ವಿಷಯದ ಬಗ್ಗೆ ಚರ್ಚೆಗೆ ನಿರಾಕರಿಸಿದ ನಂತರ ಪ್ರತಿಪಕ್ಷ ಸದಸ್ಯರು ಉಭಯ ಸದನಗಳಿಂದ ಸಭಾತ್ಯಾಗ ಮಾಡಿದರು.
ರಾಜ್ಯಸಭಾ ಕಲಾಪದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಚೀನಾದವರು ನಮ್ಮ ಭೂಮಿಯನ್ನು ಅತಿಕ್ರಮಿಸುತ್ತಿದ್ದಾರೆ. ನಾವು ಈ ವಿಷಯವನ್ನು ಚರ್ಚಿಸದಿದ್ದರೆ ಇನ್ನೇನು ಚರ್ಚಿಸಬೇಕು? ಸದನದಲ್ಲಿ ಈ ವಿಷಯದ ಬಗ್ಗೆ ಚರ್ಚೆಗೆ ಸಿದ್ಧ ಎಂದರು.
ಆದರೆ ಭಾರತ-ಚೀನಾ ಗಡಿ ಘರ್ಷಣೆ ಕುರಿತು ಚರ್ಚೆ ನಡೆಸುವಂತೆ ನೀಡಿದ ನೋಟಿಸ್‌ಗೆ ಅನುಮತಿ ನೀಡದ ಕಾರಣ ಜಂಟಿ ಪ್ರತಿಪಕ್ಷದ ವೇದಿಕೆ ರಾಜ್ಯಸಭೆಯಿಂದ ಸಭಾತ್ಯಾಗ ಮಾಡಿದೆ.
ಇದನ್ನೂ ಓದಿ: ಇಂದಿನಿಂದ 17 ದಿನ ಚಳಿಗಾಲದ ಅಧಿವೇಶನ.. ಹಳೆಯ ಸಂಸತ್ನಲ್ಲಿ ಕೊನೆಯ ಕಲಾಪ?